Bidar | 25 ಕೆ.ಜಿ ಗಾಂಜಾ ವಶ : ಮೂವರ ಬಂಧನ

ಬೀದರ್: ನಗರದ ವಿವಿಧ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ನಡೆಸಿದ ದಾಳಿಗಳಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸುಮಾರು 25 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ನಗರದ ಇರಾನಿ ಗಲ್ಲಿಗೆ ಹೋಗುವ ಕಚ್ಚಾ ರಸ್ತೆಯ ರೈಲ್ವೆ ಟ್ರ್ಯಾಕ್ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ನಡೆಯುತ್ತಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ಗಾಂಧಿಗಂಜ್ ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಬಂಧಿಸಿ, ಆಕೆಯ ಬಳಿಯಿಂದ ಸುಮಾರು 16 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ಗಾಂಜಾದ ಮೌಲ್ಯ ಸುಮಾರು 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ನಗರದ ಮಕ್ದುಮಜೀ ಕಾಲೋನಿಯ ಇರಾನಿ ಗಲ್ಲಿಗೆ ಹೋಗುವ ರಸ್ತೆಯಲ್ಲಿ ಮಹಿಳೆಯೊಬ್ಬರು ಹಾಗೂ ಪುರುಷನೊಬ್ಬ ಆಟೋದಲ್ಲಿ ಗಾಂಜಾ ಸಾಗಿಸಿ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಆರೋಪಿಗಳಿಂದ ಸುಮಾರು 9 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಇದರ ಮೌಲ್ಯ ಸುಮಾರು 4.50 ಲಕ್ಷ ರೂ. ಎಂದು ತಿಳಿದುಬಂದಿದೆ.
ಎರಡೂ ದಾಳಿಗಳಲ್ಲಿ ಒಟ್ಟು 25 ಕೆ.ಜಿ ಗಾಂಜಾ, ಸುಮಾರು 2 ಲಕ್ಷ ರೂ. ಮೌಲ್ಯದ ಆಟೋ ಸೇರಿದಂತೆ ಒಟ್ಟು 14.50 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ.
ಈ ಸಂಬಂಧ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲು ತನಿಖೆ ಮುಂದುವರಿದಿದೆ.






