ಬೀದರ್ | ಯರಂಡಗಿ ಗ್ರಾಮದಲ್ಲಿ 7 ಮಂದಿಗೆ ಹುಚ್ಚು ನಾಯಿ ಕಡಿತ : ಗಾಯಾಳುಗಳು ಆಸ್ಪತ್ರೆಗೆ ದಾಖಲು

ಬೀದರ್ : ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯರಂಡಗಿ ಗ್ರಾಮದಲ್ಲಿ ಇಂದು ಒಂದೆ ದಿನ ಏಳು ಜನರಿಗೆ ಮತ್ತು ಒಂದು ಎಮ್ಮೆಗೆ ಹುಚ್ಚು ನಾಯಿ ಕಚ್ಚಿದ ಘಟನೆ ನಡೆದಿದ್ದು, ಗ್ರಾಮ ಪಂಚಾಯತಿಯವರ ನಿರ್ಲಕ್ಷವೇ ಇದಕ್ಕೆಲ್ಲ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದ ಎರೆಡು ದಿನಗಳಿಂದ ಹುಚ್ಚು ನಾಯಿಯೊಂದು ಯರಂಡಗಿ ಗ್ರಾಮದಲ್ಲಿ ಓಡಾಡುತ್ತಿತ್ತು. ಇವತ್ತು ಆ ನಾಯಿ ಏಳು ಜನರಿಗೆ ಕಚ್ಚಿದೆ. ಗಾಯಾಳುಗಳನ್ನು ಬಸವಕಲ್ಯಾಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇತ್ತೀಚಿಗಷ್ಟೇ ಜಿಲ್ಲಾಧಿಕಾರಿಗಳು ಬೀದಿ ನಾಯಿಗಳ ಹಾವಳಿ ತಡೆಯಲು ಕ್ರಮವಹಿಸಲು ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶ ನಂತರವೂ ಇಂತಹ ದುರ್ಘಟನೆ ನಡೆದಿರುವುದು ಆತಂಕಕ್ಕಿಡಾಗಿದೆ. ಗ್ರಾಮ ಪಂಚಾಯತ್ ಮಾತ್ರ ಕಣ್ಣಿದ್ದು ಕುರುಡಾದಂತೆ ವರ್ತಿಸುತ್ತಿದೆ ಎಂದು ಗ್ರಾಮಸ್ಥ ಬಾಬುರಾವ್ ಪಾಟೀಲ್ ಆರೋಪಿಸಿದ್ದಾರೆ.
Next Story





