ಬೀದರ್ | ರಸ್ತೆ ದಾಟುತ್ತಿದ್ದ ಮಹಿಳೆಯ ಜೀವ ಉಳಿಸಲು ಹೋಗಿ ಕಾರು ಪಲ್ಟಿ; ಕಾರಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಚೆಲ್ಲಾಪಿಲ್ಲಿ

ಬೀದರ್ : ಮಹಿಳೆಯನ್ನು ಉಳಿಸಲು ಹೋದ ಕಾರು ಪಲ್ಟಿಯಾಗಿ, ಕಾರಿನಲ್ಲಿದ್ದ ಲಕ್ಷಾಂತರ ಮೌಲ್ಯದ ಗಾಂಜಾದ ಕಟ್ಟುಗಳು ಚೆಲ್ಲಾಪಿಲ್ಲಿಯಾಗಿ ರೋಡಿನಲ್ಲಿ ಬಿದ್ದ ಘಟನೆ ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ಗ್ರಾಮದ ಬಳಿ ನಡೆದಿದೆ.
ಇಂದು ಸುಮಾರು 11 ಗಂಟೆಗೆ ಹೈದರಾಬಾದ್ ಕಡೆಯಿಂದ ಮುಂಬೈ ಕಡೆಗೆ ಕಾರೊಂದು ಸಾಗುತ್ತಿತ್ತು. ಮಾರ್ಗಮಧ್ಯ ರಾಜೇಶ್ವರ ಗ್ರಾಮದ ಬಳಿ ರಸ್ತೆ ದಾಟುವ ಮಹಿಳೆಯೊಬ್ಬರಿಗೆ ಕಾರು ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿದೆ. ಪರಿಣಾಮವಾಗಿ ಕಾರಲ್ಲಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ ಗಾಂಜಾದ ಕಟ್ಟುಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಘಟನೆ ನಡೆದ ನಂತರ ಕಾರಿನಲ್ಲಿ ಇದ್ದ ಮಹಾರಾಷ್ಟ್ರ ಮೂಲದ ಇಬ್ಬರನ್ನು ಹಿಡಿದ ಸ್ಥಳೀಯರು, ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Next Story