ಬೀದರ್ | ಶಾಹೀನ್ ಕಾಲೇಜಿಗೆ ಶಿಕ್ಷಣ ತಜ್ಞರ ಸಮಿತಿ ಭೇಟಿ
ಶಾಲೆ ಬಿಟ್ಟ ಮಕ್ಕಳ ಶೈಕ್ಷಣಿಕ ಸುಧಾರಣಾ ವಿಧಾನಕ್ಕೆ ತಜ್ಞರ ಸಮಿತಿ ಮೆಚ್ಚುಗೆ

ಬೀದರ್ : ನಗರದ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಶೈಕ್ಷಣಿಕ ತೀವ್ರ ನಿಗಾ ಘಟಕ(ಎಐಸಿಯು)ಕ್ಕೆ ಕೆಕೆಆರ್‌ಡಿಬಿಯಿಂದ ರಚಿಸಲಾದ ಶಿಕ್ಷಣ ತಜ್ಞರ ಸಮಿತಿಯು ಭೇಟಿ ನೀಡಿದ್ದು, ಶಾಲೆ ಬಿಟ್ಟ ಮಕ್ಕಳ ಶೈಕ್ಷಣಿಕ ಸುಧಾರಣಾ ವಿಧಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಸಮಿತಿಯ ಅಧ್ಯಕ್ಷೆ ಛಾಯಾ ದೇಗಾಂವಕರ್, ಸದಸ್ಯ ಡಾ.ಅಬ್ದುಲ್ ಖದೀರ್, ಎನ್.ಬಿ.ಪಾಟೀಲ್, ನಾಗಾಬಾಯಿ ಬುಳ್ಳಾ ಹಾಗೂ ಮಲ್ಲಿಕಾರ್ಜುನ್ ಎಂ.ಎಸ್. ಅವರಿದ್ದ ಸಮಿತಿಯು ಭೇಟಿ ನೀಡಿ, ಕಾಲೇಜಿನ ಘಟಕದ ಕಲಿಕೆಯಲ್ಲಿ ಹಿಂದುಳಿದ ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಶೈಕ್ಷಣಿಕವಾಗಿ ಮುಖ್ಯ ವಾಹಿನಿಗೆ ತರಲು ಅನುಸರಿಸುತ್ತಿರುವ ವಿಧಾನಗಳ ಬಗ್ಗೆ ಮಾಹಿತಿ ಪಡೆದರು.
ಈ ಸಮಯದಲ್ಲಿ ಘಟಕದ ಮುಖ್ಯಸ್ಥ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಘಟಕಕ್ಕೆ ಬಂದ ಮೇಲೆ ಮೊಬೈಲ್ ವ್ಯಾಮೋಹದಿಂದ ಹೇಗೆ ಹೊರ ಬಂದೆವು, ಕಲಿಕೆಯಲ್ಲಿ ಹೇಗೆ ಆಸಕ್ತಿ ಹುಟ್ಟಿತು, ಶಿಕ್ಷಕರು ಆತ್ಮವಿಶ್ವಾಸ ವೃದ್ಧಿಸಿ ಬೇಸಿಕ್ ಸುಧಾರಣೆಗೆ ಹೇಗೆ ನೆರವಾದರು ಎನ್ನುವುದನ್ನು ವಿದ್ಯಾರ್ಥಿಗಳು ಎಳೆ ಎಳೆಯಾಗಿ ತಿಳಿಸಿದರು.
ಶಾಹೀನ್ ಸಮೂಹದ ಶಾಲಾ, ಕಾಲೇಜುಗಳನ್ನು ಹಿಂದೆಯೇ ಟ್ಯೂಷನ್, ಮೊಬೈಲ್, ಆಟೊಮೊಬೈಲ್‌ನಿಂದ ಮುಕ್ತಗೊಳಿಸಲಾಗಿದೆ. ಮನೆ ಪಾಠದಿಂದ ಮುಕ್ತಗೊಳಿಸಿದಾಗ, ಹೆಚ್ಚಿನ ಕಾಳಜಿಯ ಅವಶ್ಯಕತೆ ಮನಗಂಡು ಶೈಕ್ಷಣಿಕ ತೀವ್ರ ನಿಗಾ ಘಟಕದ ಯೋಜನೆ ರೂಪಿಸಲಾಯಿತು ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಹಾಗೂ ಸಮಿತಿಯ ಸದಸ್ಯ ಡಾ.ಅಬ್ದುಲ್ ಖದೀರ್ ಅವರು ತಿಳಿಸಿದರು.
ಛಾಯಾ ದೇಗಾಂವಕರ್ ಮಾತನಾಡಿ, ಶೈಕ್ಷಣಿಕ ತೀವ್ರ ನಿಗಾ ಘಟಕದಿಂದ ಮಕ್ಕಳ ಶೈಕ್ಷಣಿಕ ಸುಧಾರಣೆಗೆ ಶೇ.100ಕ್ಕೆ 100 ರಷ್ಟು ಪರಿಣಾಮಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಲಿಕೆಯಲ್ಲಿ ಹಿಂದುಳಿಯುವುದು, ವಿಷಯ ಅರ್ಥವಾಗದಿರುವುದು ಮಕ್ಕಳು ಶಾಲೆ ಬಿಡುವುದಕ್ಕೆ ಕಾರಣವಾಗುತ್ತದೆ. ಶೈಕ್ಷಣಿಕ ತೀವ್ರ ನಿಗಾ ಘಟಕದಿಂದ ಮಕ್ಕಳ ಮೂಲ ಶಿಕ್ಷಣ ಬಲವಾಗುತ್ತದೆ. ಕಲಿಕೆಯಲ್ಲಿ ಆಸಕ್ತಿ ಹುಟ್ಟುತ್ತದೆ. ಶಾಲೆ ಬಿಡುವುದು ತಪ್ಪುತ್ತದೆ. ಶೈಕ್ಷಣಿಕ ಪ್ರಗತಿಗೂ ನೆರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಆಯುಕ್ತ ಡಾ.ಆಕಾಶ್ ಶಂಕರ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಲೀಂ ಪಾಷಾ, ಶಾಹೀನ್ ಶೈಕ್ಷಣಿಕ ತೀವ್ರ ನಿಗಾ ಘಟಕದ ಮುಖ್ಯಸ್ಥೆ ಮೇಹರ್ ಸುಲ್ತಾನ್, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಸಿಇಒ ತೌಸಿಫ್ ಮಡಿಕೇರಿ ಹಾಗೂ ಮತ್ತಿತರರು ಇದ್ದರು.







