ಬೀದರ್ | ಲಕ್ಷಾಂತರ ರೂ. ಮೌಲ್ಯದ ನಗ-ನಗದು ದರೋಡೆಯ ಕಥೆ ಕಟ್ಟಿ ದೂರು ದಾಖಲಿಸಿದ ಮನೆಮಂದಿ!
ದೂರದಾರನ ಮನೆಯಲ್ಲೇ ಪತ್ತೆಯಾಯಿತು 'ಕಳ'ವಾದ ಸೊತ್ತು

ಸಾಂದರ್ಭಿಕ ಚಿತ್ರ | PC : PTI
ಬೀದರ್: ಔರಾದ (ಬಿ) ತಾಲೂಕಿನ ಕೌಠಾ (ಬಿ) ಗ್ರಾಮದಲ್ಲಿ ಹಾಡಹಗಲೇ ಮನೆಯಲ್ಲಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ ನಡೆದಿದೆ ಎನ್ನಲಾದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮನೆಮಂದಿ ದರೋಡೆ ಸುಳ್ಳು ಕಥೆ ಕಟ್ಟಿರುವುದು ಬಹಿರಂಗವಾಗಿದೆ.
ಮನೆಯ ಆರ್ಥಿಕ ಒತ್ತಡ ಮತ್ತು ಸಾಲಗಾರರ ಬಾಧೆಯಿಂದ ಮುಕ್ತಿ ಪಡೆಯಲು ಸುಳ್ಳು ದೂರು ದಾಖಲು ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ಕೌಠಾ (ಬಿ) ಗ್ರಾಮದಲ್ಲಿ ಹಾಡಹಗಲೆ ಮನೆಗೆ ನುಗ್ಗಿದ ತಂಡವೊಂದು ಮನೆಯಲ್ಲಿದ್ದ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ 4,25,000 ರೂ. ಮೌಲ್ಯದ 5 ತೊಲೆ ಚಿನ್ನದ ಗಂಟನ್, 4,25,000 ರೂ. ಮೌಲ್ಯದ 5 ತೊಲೆ ಚಿನ್ನದ ಬಳೆಗಳು, ಸಂಬಂಧಿಕರು ತಂದು ಮನೆಯಲ್ಲಿಟ್ಟಿದ್ದ 4,25,000 ರೂ. ಮೌಲ್ಯದ 5 ತೊಲೆ ಚಿನ್ನದ ಬಳೆಗಳು, 1,27,500 ರೂ. ಮೌಲ್ಯದ 1.5 ತೊಲೆ ಚಿನ್ನದ ನೆಕ್ಲೆಸ್, 85 ಸಾವಿರ ರೂ. ಮೌಲ್ಯದ 2 ಚಿನ್ನದ ಲಾಕೆಟ್, 85 ಸಾವಿರ ರೂ. ಮೌಲ್ಯದ ಎರಡು ಚಿನ್ನದ ಸುತ್ತುಂಗುರ, 1,27,500 ರೂ. ಮೌಲ್ಯದ ಉಂಗುರಗಳು, ಹೀಗೆ ಒಟ್ಟು 21.25 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 10 ಸಾವಿರ ರೂ. ನಗದು ದೋಚಿ ಹೋಗಿದೆ ಎಂದು ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸಿದ ಪೊಲೀಸರು, ದೂರು ನೀಡಿರುವ ಕುಟುಂಬದವರೇ ದರೋಡೆಯ ಕಥೆ ಕಟ್ಟಿರುವುದನ್ನು ಪತ್ತೆ ಹಚ್ಚಿದ್ದಾರೆ.
ತಮ್ಮ ಮನೆಯ ಆರ್ಥಿಕ ಒತ್ತಡ ಮತ್ತು ಸಾಲಗಾರರಿಂದ ಪಾರಾಗಲು ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ಸುಳ್ಳು ಪ್ರಕರಣ ದಾಖಲಿಸಿರುವುದು ತನಿಖೆಯಿಂದ ಬಹಿರಂಗಗೊಂಡಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ದೂರಿನಲ್ಲಿ ಕಳ್ಳತನವಾಗಿದೆ ಎಂದು ಉಲ್ಲೇಖಿಸಿರುವ ಎಲ್ಲಾ ಚಿನ್ನಾಭರಣ ಮತ್ತು ನಗದು ದೂರುದಾರನ ಮನೆಯಲ್ಲಿ ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.







