ಬೀದರ್ | ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ಒತ್ತಾಯಿಸಿ ನಾಳೆ ಕಾಲ್ನಡಿಗೆ ಜಾಥಾಕ್ಕೆ ಚಾಲನೆ

ಬೀದರ್ : ರಾಜ್ಯದಲ್ಲಿ 200 ಮೀಟರ್ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ಒತ್ತಾಯಿಸಿ ನಾಳೆ ನಗರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಲಾಗುವುದು ಎಂದು ಭೀಮ್ ಪ್ರಜಾ ಸಂಘದ ರಾಜ್ಯಾಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ್ ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ 10:30 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ 40 ದಿನಗಳ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಲಾಗುವುದು. ಈ ಜಾಥಾವು ಏ.14 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೊನೆಯಾಗಲಿದೆ ಎಂದರು.
ಭಾರತ ದೇಶದ ಸಂವಿಧಾನವನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿದ್ದಾರೆ. ಪಕ್ಕದ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಈಗಾಗಲೇ ನಿರ್ಮಾಣ ಮಾಡಲಾಗಿದೆ. ಯಾವುದೇ ಮನವಿ ನೀಡದೆ ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಮೂರ್ತಿ ನಿರ್ಮಾಣ ಮಾಡಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಅಂಬೇಡ್ಕರ್ ಅವರ ಮೂರ್ತಿ ನಿರ್ಮಾಣ ಮಾಡುವುದಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಅರೆಹಳ್ಳಿ ಗ್ರಾಮದ ಸರ್ವೆ ನಂ 63 ರಲ್ಲಿ 40 ಎಕರೆ ಸರ್ಕಾರದ ಜಾಗವಿದ್ದು, ಅದರಲ್ಲಿ 10 ಎಕರೆ ಭೂಮಿಯಲ್ಲಿ ಅಂಬೇಡ್ಕರ್ ಅವರ ಬೃಹತ್ ಪ್ರತಿಮೆ ನಿರ್ಮಿಸಿ ಹಾಗೂ ಉದ್ಯಾನವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡುವಂತೆ ಒತ್ತಾಯಿಸಿದರು.
ಆರ್ ಪಿ ಐ ಪಕ್ಷದ ರಾಜ್ಯಾಧ್ಯಕ್ಷ ಮಹೇಶ್ ಗೊರನಾಳಕರ್ ಮಾತನಾಡಿ, ಇಂದಿನ ಜಥಾವನ್ನು ಮನ್ನಾಎಖೆಳ್ಳಿ ಬಳಿಯ ರೇಕುಳಗಿ ಮೌಂಟ್ ಬೌದ್ದ ವಿಹಾರದ ಪೂಜ್ಯ ಭಂತೆ ರೇವತ್ ಹಾಗೂ ಅಣದೂರಿನ ಪೂಜ್ಯ ಭಂತೆ ಸಂಘರಖ್ಖಿತ ಅವರು ಜಾಥಾಕ್ಕೆ ಚಾಲನೆ ನೀಡುವರು. ಎಲ್ಲ ಸಂಘಟನೆಗಳ ಪ್ರಮುಖರನ್ನು ಪಾಲ್ಗೊಳ್ಳುವರು. ಜಿಲ್ಲೆಯ ಅಂಬೇಡ್ಕರ್ ಅಭಿಮಾನಿಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಡಾ.ಕಾಶಿನಾಥ್ ಚಲ್ವಾ, ಸಾಹಿತಿ ಶರಣು ಫುಲೆ, ಪ್ರಕಾಶ್ ರಾವಣ, ಸಂಜುಕುಮಾರ್ ಮೇತ್ರೆ, ಎ.ಜಿ ಕೃಷ್ಣಮೂರ್ತಿ, ಸಿ.ನಾಗರಾಜ್, ಮುನಿರಾಜು, ಅರವಿಂದ್ ಬನಸೊಡೆ ಹಾಗೂ ಮಾರುತಿರಾವ್ ಕಾಂಬಳೆ ಸೇರಿದಂತೆ ಇತರರು ಇದ್ದರು.







