ಬೀದರ್ | ಆರೋಗ್ಯ ಸದೃಢವಾಗಿದ್ದರೆ ಉತ್ತಮ ಸಮಾಜದ ನಿರ್ಮಾಣ ಸಾಧ್ಯ : ಅರವಿಂದ್ ಕುಲಕರ್ಣಿ

ಬೀದರ್ : ಸಮಾಜದಲ್ಲಿ ಎಲ್ಲರ ಆರೋಗ್ಯ ಸದೃಢವಾಗಿದ್ದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಬ್ರಿಮ್ಸ್ ನ ಐಸಿಟಿಸಿ ಪ್ರಯೋಗಾಲಯ ತಂತ್ರಜ್ಞಾಧಿಕಾರಿ ಅರವಿಂದ್ ಕುಲಕರ್ಣಿ ಅಭಿಪ್ರಾಯಪಟ್ಟರು.
ಇಂದು ಚಿಟ್ಟಾ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ, ಸದಸ್ಯ ಹಾಗೂ ಸಿಬ್ಬಂದಿ ವರ್ಗದವರಿಗೆ ಎಚ್ಐವಿ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತದ ದಿನಗಳಲ್ಲಿ ಪ್ರತಿ ಮನೆಯಲ್ಲಿಯೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಆದಾಯದ ಬಹುತೇಕ ಪಾಲು ಆಸ್ಪತ್ರೆಯ ವೆಚ್ಚಗಳಿಗೆ ವ್ಯಯಿಸಲಾಗುತ್ತಿದೆ. ಇದು ಅವರ ಆರ್ಥಿಕ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತಿರುವುದಕ್ಕೆ ಒಂದು ಕಾರಣವಾಗಿದೆ. ಇದರಿಂದ ಸಾಮಾಜಿಕ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದರು.
ಎಲ್ಲರಿಗೂ ಆರೋಗ್ಯ ಸೇವೆ ಲಭಿಸಲಿ ಎಂದು ಮನೆ ಮನೆಗೆ ತೆರಳಿ ಪ್ರತಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಎಚ್ಐವಿ, ಕ್ಷಯ ರೋಗ ನಿರ್ಮೂಲನೆ ಮಾಡಲು ಸರ್ಕಾರದೊಂದಿಗೆ ಎಲ್ಲಾ ಸಂಘ ಸಂಸ್ಥೆ ಹಾಗೂ ಸಮುದಾಯಗಳ ಸಹಭಾಗಿತ್ವ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.
ಐಸಿಟಿಸಿಯ ಆಪ್ತ ಸಮಾಲೋಚ ಸಿದ್ದಪ್ಪ ಅವರು ಮಾತನಾಡಿ, ಎಚ್ಐವಿ ಮತ್ತು ಕ್ಷಯರೋಗದ ಕುರಿತು ಪ್ರತಿ ತಿಂಗಳು ಎಲ್ಲಾ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಆರೋಗ್ಯ ಜಾಗೃತಿ ಅಭಿಯಾನದೊಂದಿಗೆ ಉಚಿತ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಎಚ್ಐವಿ ಕುರಿತು ಅನಗತ್ಯ ಹೆದರಿಕೆ ಬೇಡ. ಇದು ಅಸುರಕ್ಷಿತ ಲೈಂಗಿಕ ಸಂಬಂಧ, ಸಂಸ್ಕರಿಸಲ್ಪಡದ ಸಿರಂಜುಗಳ ಬಳಕೆ, ಪರೀಕ್ಷಿಸಲ್ಪಡದ ರಕ್ತ ಪಡೆಯುವುದು ಹಾಗೂ ಸೊಂಕಿತ ತಾಯಿಯಿಂದ ಮಗುವಿಗೆ ಹರಡುವ ಇದು, ಕೇವಲ ಈ ನಾಲ್ಕು ವಿಧಾನಗಳಲ್ಲಿ ಮಾತ್ರ ಹರಡುವ ರೋಗವಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯ ದಿಗಂಬರ್ ಅವರು ಮಾತನಾಡಿ, ಅನೇಕ ಜನರಿಗೆ ಕ್ಷಯ ಮುತ್ತು ಎಚ್ಐವಿ ಕುರಿತು ಹರಡುವ ಮತ್ತು ತಡೆಗಟ್ಟುವ ವಿಧಾನ ತಿಳಿದಿರುವುದಿಲ್ಲ ಆದ್ದರಿಂದ ಇಂತಹ ಜಾಗೃತಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇನ್ನೂ ಹೆಚ್ಚಿನ ಜಾಗೃತಿಯನ್ನು ಮೂಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯ ಭಾಗ್ಯಜ್ಯೋತಿ, ಗ್ರಾಮ ಪಂಚಾಯತ್ ಸದಸ್ಯ ಚಿರಂಜೀವಿ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದರು.







