Bidar | ಬಸವಾದಿ ಶರಣರಿಂದ ಬಹುದೊಡ್ಡ ವೈಚಾರಿಕ ಕ್ರಾಂತಿ: ಶೈನಿ ಗುಂಟಿ

ಬೀದರ್: 12ನೇ ಶತಮಾನದ ಬಸವಾದಿ ಶರಣರು ಬಹುದೊಡ್ಡ ವೈಚಾರಿಕ ಕ್ರಾಂತಿ ಮಾಡಿದ್ದಾರೆ ಎಂದು ಅಕ್ಕ ಪಡೆಯ ರಾಜ್ಯ ಸಂಯೋಜಕಿ ಶೈನಿ ಗುಂಟಿ ಹೇಳಿದರು.
ನಗರದ ಡಾ. ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ ಭಾನುವಾರ ಸಂಜೆ ನಡೆದ 190ನೇ ತಿಂಗಳ ‘ಅನುಭವ ಮಂಟಪ ಕಾರ್ಯಕ್ರಮ’, ‘ಮರಣವೇ ಮಹಾನವಮಿ’ ಹಾಗೂ ‘ಕಲ್ಯಾಣ ಕ್ರಾಂತಿ ವಿಜಯೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದ ಶರಣರು ಸಮ ಸಮಾಜ ನಿರ್ಮಾಣದ ಆಶಯ ಹೊಂದಿದ್ದರು. ಜಾತಿರಹಿತ, ವರ್ಗರಹಿತ ಹಾಗೂ ಸಕಲ ಜೀವಿಗಳ ಕಲ್ಯಾಣ ಬಯಸುವ ಸಮಾಜ ಹೇಗಿರಬೇಕು ಎಂಬ ದೂರದೃಷ್ಟಿ ಅವರಿಗಿತ್ತು. ಅನುಭವ ಮಂಟಪವೆಂಬ ಸಂಸತ್ತನ್ನು ಸ್ಥಾಪಿಸಿ, ಅಲ್ಲಿ ಎಲ್ಲ ಶರಣರಿಗೂ ಮುಕ್ತವಾಗಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು ಅವಕಾಶ ಕಲ್ಪಿಸಿದ್ದರು ಎಂದು ತಿಳಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, ಜಗತ್ತಿನಲ್ಲಿ ಸಮಾನತೆ ಮತ್ತು ಸ್ವಾತಂತ್ರ್ಯಕ್ಕಾಗಿ ಶರಣರು ಪ್ರಾಣಬಲಿದಾನ ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕದ ಮೊದಲ ಕವಯಿತ್ರಿ ಅಕ್ಕಮಹಾದೇವಿ. ಅವರು ತಮ್ಮ ವಚನವೊಂದರಲ್ಲಿ ‘ನಿಜವನರಿದು ನಿಶ್ಚಿಂತನಾಗಿರಬೇಕು’ ಎಂದು ಹೇಳಿದ್ದಾರೆ. ಶರಣರ ತತ್ವಗಳನ್ನು ನಿಜಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.
ಉಪನ್ಯಾಸಕ ಹಾಗೂ ಸಾಹಿತಿ ಡಾ. ಜಿ.ವಿ. ಮಂಜುನಾಥ್ ಮಾತನಾಡಿ, ಭಾರತದ ಆಧ್ಯಾತ್ಮಿಕ ಚಳವಳಿಯಲ್ಲಿ ಬಸವಾದಿ ಶರಣರು ನಡೆಸಿದ ಆತ್ಮಾನುಭಾವದ ಚಳವಳಿ ಸರ್ವಶ್ರೇಷ್ಠವಾಗಿದೆ. ಬಸವಣ್ಣನವರು ಪ್ರಜಾಪ್ರಭುತ್ವದ ಪಿತಾಮಹರಾಗಿದ್ದಾರೆ. ‘ದಯವೇ ಧರ್ಮದ ಮೂಲ’ ಎಂಬ ತತ್ವವನ್ನು ಸಾರಿದ ಧರ್ಮ ಲಿಂಗಾಯತ ಧರ್ಮವಾಗಿದೆ ಎಂದು ತಿಳಿಸಿದರು.
‘ಮರಣವೇ ಮಹಾನವಮಿ’ ಸೇವಾ ಸಮಿತಿಯ ಅಧ್ಯಕ್ಷೆ ಶಾಂತಾ ಖಂಡ್ರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೌಢ್ಯದಿಂದ ಹೊರಬಂದು ನಿಜವಾದ ಬಸವತತ್ವಗಳನ್ನು ಜೀವನದಲ್ಲಿ ಆಚರಣೆಗೆ ತರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಕುಂತಲಾ ಬೆಲ್ದಾಳೆ, ಮೀನಾಕ್ಷಿ ಪಾಟೀಲ್, ಶಕುಂತಲಾ ಮೀಸೆ, ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಸಂಚಾಲಕಿ ಸುವರ್ಣಾ ಚಿಮಕೋಡೆ, ಪ್ರಸಾದ ನಿಲಯದ ಪ್ರಮುಖರಾದ ಪ್ರೊ. ಉಮಾಕಾಂತ್ ಮೀಸೆ, ಪ್ರೊ. ಸಂಗ್ರಾಮ್ ಎಂಗಳೆ, ಸಂಗ್ರಾಮಪ್ಪ ಬಿರಾದಾರ್, ಸುರೇಖಾ ಪಾಟೀಲ್, ಲಕ್ಷ್ಮೀಬಾಯಿ ಮಾಳಗೆ, ಕಸ್ತೂರಿಬಾಯಿ ಬಿರಾದಾರ್, ರಾಜು ಜುಬ್ರೆ, ಕರುಣಾ ಜಿರ್ಗೆ, ಶಕುಂತಲಾ ಮಲ್ಕಾಪೂರೆ, ಆರತಿ ಏಖೇಳ್ಳಿ, ರಾಮೇಶ್ವರಿ, ರೂಪಾಲಿ ಹಾಗೂ ಸಂಜನಾ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸುಧಾ ನಾಯಕ್ ಸ್ವಾಗತಿಸಿದರು. ವಿಜಯಲಕ್ಷ್ಮೀ ಹುಗ್ಗೇಳ್ಳಿ ನಿರೂಪಿಸಿದರು. ಜಗದೇವಿ ನಾಗರಾಳೆ ವಂದಿಸಿದರು.






