ಬೀದರ್ | ಬಸ್ ಕಂಡಕ್ಟರ್ ಗೆ ಕಪ್ಪು ಮಸಿ ಬಳಿದ ಅಪರಾಧಿಗಳನ್ನು ಬಂಧಿಸಲು ಮನವಿ

ಬೀದರ್ : ಕರ್ನಾಟಕ ಬಸ್ ಕಂಡಕ್ಟರ್ ಅವರಿಗೆ ಕಪ್ಪು ಮಸಿ ಬಳಿದ ಅಪರಾಧಿಗಳನ್ನು ಬಂಧಿಸಬೇಕು ಎಂದು ಕನ್ನಡಿಗರ ರಕ್ಷಣಾ ವೇದಿಕೆ ಮನವಿ ಮಾಡಿದೆ.
ಇಂದು ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬೆಳಗಾವಿಯಲ್ಲಿ ಇತ್ತಿಚೆಗೆ ಬಸ್ ಕಂಡಕ್ಟರ್ ಕನ್ನಡದಲ್ಲಿ ಮಾತನಾಡಿದಕ್ಕೆ ಶಿವಸೇನೆ, ಎಂಇಎಸ್ ಕಾರ್ಯಕರ್ತರು ಹಲ್ಲೆ ಮಾಡಿದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಯಾವುದೇ ಸರ್ಕಾರಿ ನೌಕರ ಆಡುಭಾಷೆಯಲ್ಲಿ ಮಾತನಾಡುವುದು ಸಹಜವಾಗಿದೆ. ಅದರಂತೆ ಕರ್ನಾಟಕದ ಬಸ್ ಕಂಡಕ್ಟರ್ ಬೆಳಗಾವಿಯಿಂದ ಖಾನಪೂರಕ್ಕೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವ ಜನರಿಗೆ ಬಸ್ ಟಿಕೆಟ್ ಕೇಳುವಾಗ ಕನ್ನಡದಲ್ಲಿ ಮಾತನಾಡಿದ್ದಾರೆ. ಇದನ್ನು ಸಹಿಸದ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು ಕಂಡಕ್ಟರನ್ನು ಬಸ್ಸಿನಿಂದ ಕೆಳಗೆ ಇಳಿಸಿ ಹಲ್ಲೆ ಮಾಡಿ ಅಪಮಾನ ಮಾಡಿದ್ದಾರೆ. ಅದಲ್ಲದೇ ಕರ್ನಾಟಕ ಬಸ್ಸುಗಳ ನಾಮಫಲಕಗಳಿಗೆ ಮಸಿ ಹಚ್ಚಿರುವ ಘಟನೆ ನಡೆದಿದೆ ಎನ್ನಲಾಗಿದೆ.
ಕರ್ನಾಟಕ ಬಸ್ಸುಗಳ ನಾಮಫಲಕಗಳಿಗೆ ಮಸಿ ಬಳಿದಿರುವುದನ್ನು ನಮ್ಮ ಸಂಘಟನೆಯ ಜಿಲ್ಲಾ ಘಟಕ ಉಗ್ರವಾಗಿ ಖಂಡಿಸುತ್ತದೆ. ಇಂತಹ ಘಟನೆಗಳು ಮರುಕಳುಹಿಸದ ಹಾಗೆ ಮಹರಾಷ್ಟ್ರ ಮತ್ತು ಕರ್ನಾಟಕ ಸರ್ಕಾರ ನೋಡಿಕೊಳ್ಳಬೇಕು. ಅಪರಾಧಿಗಳು ಯಾರೇ ಆದರೂ ಅವರನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕನ್ನಡಿಗರ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಭವಾನಿ, ಉಪಾಧ್ಯಕ್ಷ ಆನಂದ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಈಶ್ವರ್ ಬಾಚೆಪಳ್ಳಿ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ರವಿಕುಮಾರ್ ಗುತ್ತೇದಾರ್, ತಾಲ್ಲೂಕ ಅಧ್ಯಕ್ಷ ಶರಣಪ್ಪ ಯದಲಾಪೂರ್, ನಗರ ಅಧ್ಯಕ್ಷ ವಿಜಯಕುಮಾರ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಗುಲಾಮ್ ಅಲಿಖಾನ್, ರತಿಕಾಂತ್ ಹೊಸದೊಡ್ಡೆ, ಮಲ್ಲಿಕಾರ್ಜುನ್ ಬಾಚೆಪಳ್ಳಿ ಹಾಗೂ ವಿನೋದ್ ಆನೆಕಲ್ ಸೇರಿದಂತೆ ಇತರರು ಇದ್ದರು.







