ಬೀದರ್ | ಚೌಳಿ ಕಮಾನ ಬಳಿ ವಾಸಿಸುವ ಅಲೆಮಾರಿ ಸಮುದಾಯಕ್ಕೆ ತಾತ್ಕಾಲಿಕ ನಿವೇಶನ ಕಲ್ಪಿಸಲು ಮನವಿ

ಬೀದರ್ : ನಗರದ ಚೌಳಿ ಕಮಾನ ಸಮೀಪ ಬೀದಿ ಬದಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಗಳಾದ ಸಿಂದೋಳ್, ಮಾಂಗರವಾಡಿ ಹಾಗೂ ಕೊರವ ಜನಾಂಗದ ಕುಟುಂಬಗಳಿಗೆ ಕಾರಂಜಾ ಗ್ರಾಮದ ಸರ್ವೆ ನಂ.45ರಲ್ಲಿ ತಾತ್ಕಾಲಿಕವಾಗಿ ವಾಸಿಸಲು ಜಾಗ ಮಂಜೂರು ಮಾಡುವಂತೆ ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ್ ರೊಟ್ಟೆ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪರಿಶಿಷ್ಟ ಜಾತಿ-ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ ಅವರಿಗೆ ಶನಿವಾರ ಸಲ್ಲಿಸಿದ ಮನವಿಯಲ್ಲಿ, ಸಮಾಜ ಕಲ್ಯಾಣ ಇಲಾಖೆಯು ಸರ್ವೆ ನಂ.87ರಲ್ಲಿ ಎರಡು ಎಕರೆ ಜಮೀನು ಕಾಯ್ದಿರಿಸಿದ್ದರೂ ಅದು ವಾಸಯೋಗ್ಯವಲ್ಲ ಎಂದು ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದೇ ವಿಷಯವನ್ನು ಎ.18 ರಂದು ನಡೆದ ಸಭೆಯಲ್ಲಿಯೂ ಅಧ್ಯಕ್ಷರ ಗಮನಕ್ಕೆ ತರಲಾಗಿತ್ತು ಎಂದು ತಿಳಿಸಲಾಗಿದೆ.
ಕಾರಂಜಾ ಗ್ರಾಮದ ಸರ್ವೆ ನಂ.45 ರಲ್ಲಿ ನಾಲ್ಕು ಎಕರೆ ಜಮೀನು ಲಭ್ಯವಿದ್ದು, ಅದರಲ್ಲಿ ಒಂದು ಎಕರೆ ಜಮೀನನ್ನು ಚೌಳಿ ಕಮಾನ ಸಮೀಪದ ಅಲೆಮಾರಿ ಸಮುದಾಯದವರಿಗೆ ನೀಡಲು ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಹೀಗಾಗಿ ತಕ್ಷಣವೇ ಹದ್ದುಬಸ್ತು ಮಾಡಿ ಜಮೀನು ಹಸ್ತಾಂತರಿಸಲು ಸೂಚನೆ ನೀಡುವಂತೆ ಮನವಿ ಮಾಡಲಾಗಿದೆ.
ಪ್ರಸ್ತುತ ಅಲೆಮಾರಿ ಕುಟುಂಬಗಳು ವಾಸಿಸುತ್ತಿರುವ ಸ್ಥಳಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಭೂ ಮಾಲಕರ ಪರವಾಗಿ ಬಂದಿದ್ದು, ಗುಡಿಸಲುಗಳನ್ನು ತೆರವುಗೊಳಿಸುವಂತೆ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದೆ. ಜೂ.30ರ ಒಳಗಾಗಿ ಸ್ಥಳ ಖಾಲಿ ಮಾಡಲು ಕಾಲಾವಕಾಶ ನೀಡಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಚೌಳಿ ಕಮಾನ್ ಹತ್ತಿರದ ಅಲೆಮಾರಿ ಸಮುದಾಯದ ಜನರಾದ ಶಾಮ್, ದುರ್ಗಪ್ಪ, ರಾಮಕ್ಕ, ಸುಶೀಲಾ, ಪೊಚಮ್ಮ ಹಾಗೂ ರಾಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.






