ಬೀದರ್ | ಜಿಲ್ಲೆಯಲ್ಲಿ ಒಟ್ಟು 30 ಹೆಸರು, ಉದ್ದು ಖರೀದಿ ಕೇಂದ್ರ ಪ್ರಾರಂಭ

ಬೀದರ್ : 2025-26ನೇ ಸಾಲಿಗೆ ಭಾರತ ಸರ್ಕಾರವು ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬೀದರ್ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದಿರುವ FAQ ಗುಣಮಟ್ಟದ ಪ್ರತಿ ಕ್ವಿಂಟಲ್ ಹೆಸರಿಗೆ 8,768 ರೂ. ಹಾಗೂ ಉದ್ದಿಗೆ 7,800 ರೂ. ದರದಲ್ಲಿ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ರೈತರಿಂದ ಖರೀದಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಅದರನ್ವಯ ಜಿಲ್ಲೆಯಲ್ಲಿ ಒಟ್ಟು 30 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿಯ ಸಹಾಯಕ ನಿರ್ದೇಶಕ ಹಾಗೂ ಸದಸ್ಯ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಖರೀದಿ ಕೇಂದ್ರಗಳ ವಿವರ: ಬೀದರ್ ತಾಲ್ಲೂಕಿನ ಬಗದಲ್, ಜನವಾಡಾ, ಮಾಳೆಗಾಂವ್, ಮನ್ನಳ್ಳಿ, ಅಣದೂರ್, ಕಮಠಾಣಾ. ಭಾಲ್ಕಿ ತಾಲ್ಲೂಕಿನ ಲಕನಗಾಂವ್, ಹಲಬರ್ಗಾ (ಸಹಯೋಗ ಸುವಿಧಾ ಉತ್ಪಾದಕರ ಕಂ.ಲಿ.), ಖಟಕಚಿಂಚೋಳಿ, ಕುರುಬಖೇಳಗಿ, ಸಾಯಿಗಾಂವ್, ಭಾತಂಬ್ರಾ. ಹುಮನಾಬಾದ್ ತಾಲ್ಲೂಕಿನ ನಿರ್ಣಾ, ದುಬಲಗುಂಡಿ, ಚಿಟಗುಪ್ಪಾ, ಘಾಟಬೋರಾಳ್, ಹಳ್ಳಿಖೇಡ್ (ಬಿ), ಬೇಮಳಖೇಡ, ಬಸವಕಲ್ಯಾಣ ತಾಲ್ಲೂಕಿನ ಮುಡಬಿ, ಕೋಹಿನೂರ್, ಮಂಠಾಳ್, ರಾಜೇಶ್ವರ್, ಹುಲಸುರ್, ಮುಚಳಂಬ ಹಾಗೂ ಔರಾದ್ (ಬಿ) ತಾಲ್ಲೂಕಿನ ಔರಾದ್ (ಬಿ), ಚಿಂತಾಕಿ, ಸಂತಪೂರ್, ಠಾಣಾಕುಶನೂರ್, ಮುಧೋಳ್ (ಬಿ) ಹಾಗೂ ಕಮಲನಗರ.
ರಾಜ್ಯ ಸರ್ಕಾರದ ಆದೇಶ ಹೊರಡಿಸಿದ ದಿನಾಂಕದಿಂದ ರೈತರ ನೊಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿದೆ. ಖರೀದಿ ಪ್ರಕ್ರಿಯೆಯಲ್ಲಿ ರೈತರು ಪ್ರತಿ ಎಕರೆಗೆ ಗರಿಷ್ಠ ಹೆಸರು 15 ಮತ್ತು ಉದ್ದು 30 ಕ್ವಿಂಟಲ್ ನಂತೆ FAQ ಗುಣಮಟ್ಟದ ಹೆಸರು ಮತ್ತು ಉದ್ದಿನಕಾಳು ಮಾರಾಟ ಮಾಡಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಖರೀದಿ ಕೇಂದ್ರಗಳು ಲಾಗ್ ಇನ್ ಕ್ರೆಡೆನ್ಸಿಯಲ್ಸಗಳನ್ನು ಪಡೆದು ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದ ಮೇಲೆ ನೋಂದಣಿ ಮಾಡಿಕೊಳ್ಳಲು ಇಚ್ಚಿಸುವ ರೈತರು ಸಮೀಪದ ಖರೀದಿ ಕೇಂದ್ರಗಳಿಗೆ ನೋಂದಣಿ ಮಾಡಿಸಿಕೊಂಡು ತಮ್ಮ ಹೆಸರು ಕಾಳು ಮತ್ತು ಉದ್ದಿನ ಕಾಳು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿ ಸದರಿ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.







