ಬೀದರ್ | ಅ.10 ರಿಂದ 24ನೇ ಕಲ್ಯಾಣ ಪರ್ವ ಕಾರ್ಯಕ್ರಮ : ಬಸವರಾಜ್ ಬುಳ್ಳಾ

ಬೀದರ್ : ಪ್ರತಿ ವರ್ಷದಂತೆ ಈ ವರ್ಷವು ಕೂಡ ಅ.10, 11 ಮತ್ತು 12 ರಂದು ಬಸವಕಲ್ಯಾಣದಲ್ಲಿ 24ನೇ ಕಲ್ಯಾಣ ಪರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಪರ್ವದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಬಸವರಾಜ್ ಬುಳ್ಳಾ ಅವರು ತಿಳಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ಪರ್ವ ಸುಮಾರು 24 ವರ್ಷಗಳಿಂದ ನಡೆದುಕೊಂಡು ಬಂದಿದೆ. ಪರ್ವ ಎಂದರೆ ಕಾಲ ಎಂದರ್ಥ. ಈ ಜಗತ್ತಲ್ಲಿ ಕೊಲೆ, ಸುಲಿಗೆ, ಯುದ್ಧಗಳು ನಡೆಯುತ್ತಿವೆ. ಇದು ಮಾನವ ಕುಲಕ್ಕೆ ಮಾರಕವಾಗಿದೆ. ಆದ್ದರಿಂದ ವಿಶ್ವದಲ್ಲಿ ಶಾಂತಿ ಕಾಪಾಡುವುದು ಇದರ ಉದ್ದೇಶವಾಗಿದೆ. ಹಾಗೆಯೇ 12ನೇ ಶತಮಾನದ ಶರಣರ ಜಾತಿ, ವರ್ಣ ಹಾಗೂ ಲಿಂಗ ರಹಿತ ಸಮಸಮಾಜ ನಿರ್ಮಾಣ ಮಾಡುವುದೇ ಈ ಕಲ್ಯಾಣ ಪರ್ವದ ಉದ್ದೇಶವಾಗಿದೆ ಎಂದರು.
ಅ.10ರಂದು ಉದ್ಘಾಟನಾ ಸಮಾರಂಭ, ಮಹಿಳಾ ಗೋಷ್ಠಿ ಹಾಗೂ ರಾತ್ರಿ 8:30 ಗಂಟೆಗೆ ಮಹಾ ಕ್ರಾಂತಿ ನಾಟಕ ನಡೆಯಲಿದೆ. ಅ.11 ರಂದು ಧರ್ಮ ಚಿಂತನ ಗೋಷ್ಠಿ, ರಾಷ್ಟ್ರೀಯ ಬಸವದಳ ಸಮಾವೇಶ ಹಾಗೂ ಸಮಾಜ ಚಿಂತನ ಗೋಷ್ಠಿ ಜರುಗಲಿದೆ. ಹಾಗೆಯೇ ಅ.12 ರಂದು ಬಸವಣ್ಣನವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.
ಅ. 11 ರಂದು ಮುಂಜಾನೆ 10:30 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬೀದರ್ ನ ರೋಟರಿ ಕ್ಲಬ್ ನ್ಯೂ ಸಂಚುರಿ ವತಿಯಿಂದ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಹಾಗೂ ಬೀದರ್ ನ ಎಸ್. ಬಿ. ಡೆಂಟಲ್ ಕಾಲೇಜು ವತಿಯಿಂದ ಉಚಿತ ದಂತರೋಗ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ ಎಂದು ಹೇಳಿದರು.
ಅ.11 ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶರಣ ಸಮಾಜ ಸೇವಾರತ್ನ ಪ್ರಶಸ್ತಿಗೆ ಡಾ. ಭೀಮಣ್ಣ ಖಂಡ್ರೆ ಹಾಗೂ ಮಲ್ಲಿಕಾರ್ಜುನ್ ಗುಂಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಎನ್ನುವುದರಲ್ಲಿ ಗೊಂದಲಗಳಿಗೆ ಪ್ರತಿಕ್ರಿಯಿಸಿದ ಅವರು, ಯಾರು ಏನಾದರೂ ಹೇಳಲಿ ವೀರಶೈವ ಎನ್ನುವುದು ಲಿಂಗಾಯತ ಧರ್ಮದ ಒಂದು ಪಂಗಡವಾಗಿದೆ. ಅದು ಧರ್ಮ ಆಗುವುದಕ್ಕೆ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.
ಕಾರ್ಯಕ್ರಮದಲ್ಲಿ ಎಲ್ಲ ರಾಜಕೀಯ ಮುಖಂಡರನ್ನು, ಮಠಾಧೀಶರನ್ನು ಆಹ್ವಾನಿಸಲಾಗಿದೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಿದ್ದರಾಮೇಶ್ವರ್ ಸ್ವಾಮಿ, ಸ್ವಾಗತ ಸಮಿತಿಯ ಅಧ್ಯಕ್ಷ ಕಂಟೆಪ್ಪಾ ಗಂದಿಗುಡಿ, ಪ್ರಧಾನ ಕಾರ್ಯದರ್ಶಿ ಶಿವರಾಜ್ ನರಶೆಟ್ಟಿ, ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಸೋಮಶೇಖರ್ ಪಾಟೀಲ್ ಗಾದಗಿ, ಕುಶಾಲರಾವ್ ಪಾಟೀಲ್ ಗಾದಗಿ, ಸಂಜುಕುಮಾರ್, ವಿಲಾಸ್ ಪಾಟೀಲ್, ಯೋಗೇಶ್ ಸಿರಿಗೆರೆ, ವೀರಶೆಟ್ಟಿ ಪಾಟೀಲ್ ಹಾಗೂ ಪಂಚಾಕ್ಷರಿ ಸೇರಿದಂತೆ ಇತರರು ಇದ್ದರು.







