ಬೀದರ್ | ಚಿಂತಾಕಿ ನಾಡ ಕಚೇರಿಯಲ್ಲಿ ಆಧಾರ್ ಸೇವಾ ಕೇಂದ್ರ ಪ್ರಾರಂಭಿಸಲು ಮನವಿ

ಬೀದರ್ : ಔರಾದ್ ತಾಲೂಕಿನ ಚಿಂತಾಕಿಯ ನಾಡ ಕಚೇರಿಯಲ್ಲಿ ಆಧಾರ್ ಸೇವಾ ಕೇಂದ್ರ ಪ್ರಾರಂಭ ಮಾಡಬೇಕು ಎಂದು ನಾಗಮಾರಪಳ್ಳಿ ಗ್ರಾಮಸ್ಥರು ಗುರುವಾರ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ, ಚಿಂತಾಕಿಯಲ್ಲಿ ನಾಡ ಕಚೇರಿಯಲ್ಲಿ ಬರುವ ಹಳ್ಳಿಗಳ ಸಾರ್ವಜನಿಕರಿಗೆ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ, ಮೊಬೈಲ್ ಸಂಖ್ಯೆ ಜೋಡಣೆ, ಬಯೋಮೆಟ್ರಿಕ್ ಅಪ್ಡೇಟ್ ಸೇರಿದಂತೆ ವಿವಿಧ ಆಧಾರ್ ಸೇವೆಗಳನ್ನು ಪಡೆಯಲು ದೂರದ ಪಟ್ಟಣಗಳಿಗೆ ತೆರಳಬೇಕಾಗುತ್ತಿದೆ. ಇದರಿಂದ ಸಾರ್ವಜನಿಕರ ಸಮಯ ಹಾಗೂ ಹಣದ ವ್ಯಯವಾಗುತ್ತಿದ್ದು, ವಿಶೇಷವಾಗಿ ಹಿರಿಯ ನಾಗರಿಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಆದ್ದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಚಿಂತಾಕಿ ನಾಡ ಕಚೇರಿಯಲ್ಲಿ ಶಾಶ್ವತ ಆಧಾರ್ ಸೇವಾ ಕೇಂದ್ರವನ್ನು ಪ್ರಾರಂಭಿಸಿ, ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ನಾಗಮಾರಪಳ್ಳಿ ಗ್ರಾಮಸ್ಥರಾದ ಧನರಾಜ್ ಹಾಗೂ ಸತೀಶ್ ಸಿಂಧೆ ಉಪಸ್ಥಿತರಿದ್ದರು.




