ಬೀದರ್ | ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಗೆ ಅಬ್ದುಲ್ ಮನ್ನಾನ್ ಸೇಠ್ ಖಂಡನೆ

ಬೀದರ್ : ಸಂವಿಧಾನ ಪೀಠಿಕೆಯಿಂದ ಸಮಾಜವಾದ ಹಾಗೂ ಜಾತ್ಯತೀತ ಪದಗಳನ್ನು ಕಿತ್ತು ಹಾಕಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದತ್ತಾತ್ರೇಯ ಹೊಸಬಾಳೆ ನೀಡಿರುವ ಹೇಳಿಕೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮನ್ನಾನ್ ಸೇಠ್ ಅವರು ಪ್ರಕಟಣೆ ಮೂಲಕ ಖಂಡಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸಂವಿಧಾನ ಪೀಠಿಕೆ ಅಷ್ಟೇ ಅಲ್ಲ, ಭಾರತದ ಸಂವಿಧಾನವೇ ಬೇಡವಾಗಿದೆ. ಸಂವಿಧಾನ ಸಭೆ 1949ರ ನವೆಂಬರ್ 26 ರಂದು ಸಂವಿಧಾನವನ್ನು ಅಂಗೀಕರಿಸಿದ ನಾಲ್ಕು ದಿನಗಳ ನಂತರ ಆರೆಸೆಸ್ಸ್ ಮುಖವಾಣಿ ಆರ್ಗನೈಜರ್ ಸಂಪಾದಕೀಯದಲ್ಲಿ ಸಂವಿಧಾನವನ್ನು ಟೀಕಿಸಲಾಗಿತ್ತು. ಇದರಲ್ಲಿ ಭಾರತೀಯತೆ, ಭಾರತದ ಕಾನೂನು, ಕಟ್ಟಳೆಗಳಿಲ್ಲ. ಸಂರಕ್ಷಣೆ ಇಲ್ಲ ಎಂದು ಬರೆಯಲಾಗಿತ್ತು ಎಂದು ಅವರು ಆರೋಪಿಸಿದರು.
ಆರೆಸೆಸ್ಸ್ ಮುಖಂಡ ಎಂ.ಎಸ್.ಗೋಳ್ವಾಲ್ಕರ್ ತಮ್ಮ ಬಂಚ್ ಆಫ್ ಥಾಟ್ಸ್ ಎಂಬ ಪುಸ್ತಕದಲ್ಲಿ ನಮ್ಮ ಸಂವಿಧಾನವು ಪಾಶ್ಚಿಮಾತ್ಯ ರಾಷ್ಟ್ರಗಳ ಸಂವಿಧಾನದ ತುಣುಕುಗಳ ಜೋಡಣೆ ಎಂದು ಬರೆದಿದ್ದರು ಎಂದು ಆರೋಪಿಸಿದ ಅವರು, ನಂತರವೂ ಆರೆಸೆಸ್ಸ್ ಹಾಗೂ ಬಿಜೆಪಿ ಮುಖಂಡರು ಒಂದಿಲ್ಲೊಂದು ರೀತಿಯಲ್ಲಿ ಸಂವಿಧಾನವನ್ನು ವಿರೋಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬಹುಮತದಿಂದ ಸರ್ಕಾರ ರಚಿಸಿದರೆ ಸಂವಿಧಾನ ಬದಲಾವಣೆ ಮಾಡುವುದಾಗಿ ಬಿಜೆಪಿಯವರು ಹೇಳುತ್ತ ಬಂದಿದ್ದಾರೆ. ಹೊಸಬಾಳೆ ಇದೀಗ ಮತ್ತೆ ಅದೇ ವಿಚಾರವನ್ನು ಪುನರಾವರ್ತಿಸಿದ್ದಾರೆ. ಸಂವಿಧಾನವನ್ನು ಗೌರವಿಸುವ ಭಾರತೀಯರೆಲ್ಲರೂ ಹೊಸಬಾಳೆ ಅವರ ಹೇಳಿಕೆಯನ್ನು ಖಂಡಿಸಬೇಕು ಎಂದು ಆಗ್ರಹಿಸಿದ್ದಾರೆ.







