ಬೀದರ್ | ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಲಂಚ ಪಡೆದ ಆರೋಪ : ಮುಖ್ಯ ಶಿಕ್ಷಕ ಅಮಾನತು

ಬೀದರ್ : ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಲಂಚ ಸೇರಿ ಸ್ವೀಕರಿಸಿದ್ದು ಸೇರಿದಂತೆ ಇನ್ನೂ ಹಲವು ಆರೋಪದಡಿ ಔರಾದ್(ಬಿ) ತಾಲೂಕಿನ ಕೊಳ್ಳುರು ಗ್ರಾಮದ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಸುರೇಶ್ ಪಾಂಡ್ರೆ ಅವರನ್ನು ಅಮಾನತುಗೊಳಿಸಲಾಗಿದೆ.
ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವಾಗ ಅಭ್ಯರ್ಥಿಗಳಿಂದ ಸುರೇಶ್ ಪಾಂಡ್ರೆ 12 ಸಾವಿರ ರೂ. ಪಡೆದ ಆಡಿಯೋ ರೆಕಾರ್ಡಿಂಗ್ ಸಿಕ್ಕಿದೆ. ಇದಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜೊತೆಗೆ ಬಾಳೆ ಹಣ್ಣು ವಿತರಿಸಿರುವುದಿಲ್ಲ. ಅಡುಗೆ ಸಿಬ್ಬಂದಿ ಮತ್ತು ಪೋಷಕರಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ ಎಂದು ಆರೋಪಿಸಲಾಗಿದೆ.
ಮಕ್ಕಳಿಗೆ ನೀಡುವ ಶೂ ಮತ್ತು ಸಾಕ್ಸ್ ಖರೀದಿ ಪ್ರಕ್ರಿಯೆಯಲ್ಲಿಯೂ ಕಮಿಷನ್ ತೆಗೆದುಕೊಂಡು ಅತ್ಯಂತ ಕಳಪೆ ಮಟ್ಟದ ಬೂಟ್ ಮತ್ತು ಸಾಕ್ಸ್ ನೀಡಿದ್ದಾರೆ. ಶಾಲೆಯಲ್ಲಿನ ಲ್ಯಾಪ್ ಟಾಪ್ ಮನೆಯಲ್ಲಿ ಇಟ್ಟುಕೊಂಡು ಸ್ವಂತ ಕಾರ್ಯಕ್ಕೆ ದುರುಪಯೋಗ ಮಾಡಿಕೊಂಡಿರುತ್ತಾರೆ. ಅದಲ್ಲದೇ 15 ನೇ ಆಗಸ್ಟ್ 2024 ರಂದು ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯ ವ್ಯಕ್ತಿಗಳಿಗೆ ಆಹ್ವಾನ ನೀಡಿರುವುದಿಲ್ಲ ಎಂದು ದೂರಲಾಗಿದೆ.
ಈ ಮೇಲಿನ ಎಲ್ಲ ಕಾರಣಗಳಿಂದ ಮುಖ್ಯ ಶಿಕ್ಷಕ ಸುರೇಶ್ ಪಾಂಡ್ರೆ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.







