ಬೀದರ್ | ಅಕ್ರಮ ಸಂಬಂಧ ಆರೋಪಿಸಿ ಹಲ್ಲೆ : ಗಾಯಗೊಂಡಿದ್ದ ಯುವಕ ಮೃತ್ಯು : ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ
ಬೀದರ್: ಅಕ್ರಮ ಸಂಬಂಧವಿದೆ ಎಂದು ಆರೋಪಿಸಿ ಯುವಕನೊಬ್ಬನನ್ನು ಮನ ಬಂದಂತೆ ಥಳಿಸಿದ ಪರಿಣಾಮ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿರುವ ಘಟನೆ ಔರಾದ್ ತಾಲ್ಲೂಕಿನ ನಾಗನಪಲ್ಲಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಗೌಣಗಾಂವ್ ಗ್ರಾಮದ ವಿಷ್ಣು (27) ಮೃತಪಟ್ಟ ಯುವಕ. ನಾಗನಪಲ್ಲಿ ಗ್ರಾಮದ ಯುವತಿಯೊಬ್ಬಳಿಗೆ ಲಾತೂರ್ ಜಿಲ್ಲೆಯ ಸುಕಲ್ಲಿ ಗ್ರಾಮದಲ್ಲಿ ವಿವಾಹವಾಗಿದ್ದು, ಆಕೆಗೂ ಇಬ್ಬರು ಮಕ್ಕಳಿದ್ದಾರೆ. ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿಷ್ಣು ಮತ್ತು ಆಕೆಯ ನಡುವೆ ಪರಿಚಯವಾಗಿ ಸಂಬಂಧ ಬೆಳೆದಿದೆ ಎಂದು ತಿಳಿದು ಬಂದಿದೆ.
ಮಹಿಳೆಯು 3 ತಿಂಗಳಿಂದ ತನ್ನ ತನ್ನ ತವರು ಮನೆಯಾದ ನಾಗನಪಲ್ಲಿ ಗ್ರಾಮದಲ್ಲಿ ಬಂದು ನೆಲೆಸಿದ್ದಾಳೆ. ವಿಷ್ಣು ಅ.21ರ ಮಂಗಳವಾರದಂದು ತನ್ನ ಇಬ್ಬರು ಸ್ನೇಹಿತರ ಜತೆಗೆ ಬೈಕ್ ಮೇಲೆ ನಾಗನಪಲ್ಲಿ ಗ್ರಾಮಕ್ಕೆ ಬಂದಿದ್ದನು. ಇವನನ್ನು ನೋಡಿದ ಮಹಿಳೆಯ ಸಹೋದರ ಮತ್ತು ತಂದೆಯು ಆತನನ್ನು ಮನ ಬಂದಂತೆ ಕೋಲಿನಿಂದ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ವಿಷ್ಣುವಿನ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ನನ್ನ ಮಗನನ್ನು ಕೊಲೆ ಮಾಡುವ ಉದ್ದೇಶದಿಂದ ಮಹಿಳೆಯ ತಂದೆ ಅಶೋಕ್ ಹಾಗೂ ಸಹೋದರ ಗಜಾನನ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಅಕ್ರಮ ಸಂಬಂಧ ಆರೋಪಕ್ಕೆ ಒಳಗಾದ ಮಹಿಳೆಯೂ ಪ್ರತಿದೂರು ನೀಡಿದ್ದಾರೆ.
ಗಂಭೀರ ಗಾಯಗೊಂಡ ವಿಷ್ಣುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಎರಡು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.







