ಬೀದರ್ | ನೀಲಿ ಧ್ವಜಕ್ಕೆ ಅವಮಾನ ಆರೋಪ; ಉಚ್ಚಾ ಗ್ರಾಮದಲ್ಲಿ ಶಾಂತಿ ಸಭೆ

ಬೀದರ್ : ಅಂಬೇಡ್ಕರ್ ಜಯಂತಿ ಸಮಯದಲ್ಲಿ ಕಂಬಕ್ಕೆ ಕಟ್ಟಿದ ನೀಲಿ ಧ್ವಜವನ್ನು ಚರಂಡಿಗೆ ಎಸೆದು ಅವಮಾನ ಮಾಡಲಾಗಿದೆ ಎಂದು ಖಟಕ ಚಿಂಚೋಳಿಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಚ್ಚಾ ಗ್ರಾಮದಲ್ಲಿ ಪಿಎಸ್ಐ ಪ್ರಭಾಕರ್ ಅವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಪಿಎಸ್ಐ ಪ್ರಭಾಕರ್ ಅವರು ಮಾತನಾಡಿ, ಈ ಘಟನೆ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ. ಮೇಲಧಿಕಾರಿಗಳಿಗೂ ಈ ಪ್ರಕರಣದ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದರು.
ಗ್ರಾಮದಲ್ಲಿ ಎಲ್ಲರೂ ಸಹೋದರತೆ, ಸಹಬಾಳ್ವೆಯಿಂದ ಬದುಕಬೇಕು. ಶಾಂತಿಯನ್ನು ಕಾಪಾಡಿಕೊಳ್ಳಬೇಕು. ಇತ್ತೀಚಿಗೆ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಚ್ಚರಿಕೆಯಿಂದ ಇರಬೇಕು. ಮೊದಲೆಲ್ಲ ಗ್ರಾಮದ ಜನರು ಪೊಲೀಸರಿಗೆ ಹೆದರುತ್ತಿದ್ದರು. ಆದರೆ, ಇವಾಗ ಮನೆ ಮನೆಗೆ ಪೊಲೀಸ್ ಯೋಜನೆ ಅರಿವು ಕಾರ್ಯಕ್ರಮದ ಮೂಲಕ ಜನರ ಸಮಸ್ಯೆ ಆಲಿಸಲು ಪೊಲೀಸರೇ ತಮ್ಮ ಮನೆಗೆ ಆಗಮಿಸುತ್ತಿದ್ದಾರೆ ಎಂದರು.
ಯಾರೋ ಒಬ್ಬರು ಕೆಟ್ಟ ಕೆಲಸ ಮಾಡಿದಾಗ ಇಡೀ ಊರಿಗೆ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕು. ಈ ಘಟನೆ ಕುರಿತು ತಹಶೀಲ್ದಾರ್ ಅವರ ನೇತೃತ್ವದಲ್ಲಿ ಇನ್ನೊಂದು ಸಲ ಶಾಂತಿ ಸಭೆ ನಡೆಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ, 'ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಸದಾನಂದ, ಪವನ ಠಾಕುರ್, ಸುಶೀಲ್ ಸಿಂಗೆ, ಸುಧಾಕರ್ ಗಾಯಕವಾಡ, ಅರ್ಜುನ್ ಕಾಳೆ, ಸಚಿನ್ ಕಾಳೆ, ವಿಶ್ವನಾಥ್ ಸಿಂಗೆ, ಗೌತಮ್ ಮನಾಳೆ ಹಾಗೂ ಲಕ್ಷ್ಮಣ ಫುಲೆ ಸೇರಿದಂತೆ ಗ್ರಾಮದ ಇತರರು ಉಪಸ್ಥಿತರಿದ್ದರು.







