Bidar | ಅಕ್ರಮ ಚಟುವಟಿಕೆಯಲ್ಲಿ ಭಾಗಿ ಆರೋಪ: ಇಬ್ಬರು ರೌಡಿಶೀಟರ್ ಗಳ ಗಡಿಪಾರು

ಬೀದರ್: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣ ತಾಲೂಕಿನ ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯ ಭೋಸಗಾ ಗ್ರಾಮದ ಅಂಗದ್ ಕಾಂಬಳೆ ಹಾಗೂ ಹುಮನಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಘೋಡವಾಡಿ ಗ್ರಾಮದ ಎಂ.ಡಿ. ಶರೀಫಮಿಯ್ಯಾ ನಾಂದೇಡಿ ಅವರನ್ನು ಗಡಿಪಾರು ಮಾಡಲಾಗಿದೆ.
ಅಂಗದ್ ಕಾಂಬಳೆ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಜೂಜಾಟ ನಡೆಸುತ್ತಿದ್ದನು. ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮಟ್ಕಾ ಜೂಜಾಟ ನಡೆಸಿ ಬಡ ಕೂಲಿ ಕಾರ್ಮಿಕರು, ರೈತರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳನ್ನು ಜೂಜಾಟಕ್ಕೆ ಸೆಳೆಯುತ್ತಿದ್ದ ಆರೋಪವಿದೆ. ಈತನ ವಿರುದ್ಧ ಸುಮಾರು 11 ಪ್ರಕರಣಗಳು ದಾಖಲಾಗಿದ್ದರೂ ಅಕ್ರಮ ಚಟುವಟಿಕೆ ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಎಂ.ಡಿ. ಶರೀಫಮಿಯ್ಯಾ ನಾಂದೇಡಿ ಹುಮನಾಬಾದ್ ಹಾಗೂ ಭಾಲ್ಕಿ ಪಟ್ಟಣಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮತ್ತು ಸಾಗಾಟದಲ್ಲಿ ತೊಡಗಿದ್ದ ಆರೋಪ ಎದುರಿಸುತ್ತಿದ್ದನು. ಈತನ ವಿರುದ್ಧ ಸುಮಾರು ಐದು ಪ್ರಕರಣಗಳು ದಾಖಲಾಗಿದ್ದರೂ ಅಕ್ರಮ ಚಟುವಟಿಕೆ ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯಿಂದ ಕೋಲಾರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಗಡಿಪಾರು ಕ್ರಮವನ್ನೂ ಜರುಗಿಸಲಾಗುವುದು. ಸಾರ್ವಜನಿಕರು ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿದ್ದು, ತಮ್ಮ ಹಾಗೂ ಕುಟುಂಬದ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಎಸ್ಪಿ ಪ್ರದೀಪ್ ಗುಂಟಿ ಮನವಿ ಮಾಡಿದ್ದಾರೆ.






