Bidar | ನೀಟ್ ಪರೀಕ್ಷೆಯಲ್ಲಿ ಶಾಹೀನ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಬೀದರ್ : ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್-2026)ಯಲ್ಲಿ ನಗರದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಸರ್ಕಾರಿ ಕೋಟಾದಡಿ ಕಾಲೇಜಿನ 448 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟು ದೊರೆಯುವ ನಿರೀಕ್ಷೆಯಿದೆ.
ನೀಟ್ ಪರೀಕ್ಷೆಯಲ್ಲಿ ಕಾಲೇಜಿನ ಏಳು ವಿದ್ಯಾರ್ಥಿಗಳು 625ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ಮುಹಮ್ಮದ್ ಸಾಜೀದ್ ಅಕ್ಬರ್ 653 ಅಂಕ (ಭಾರತದಲ್ಲಿ 1,271ನೇ ರ‍್ಯಾಂಕ್ ಹಾಗೂ ಒಬಿಸಿ ವಿಭಾಗದಲ್ಲಿ 100ನೇ ರ‍್ಯಾಂಕ್), ಅನ್ಸಾರಿ ಅರೀಬ್ 641, ಅರಿಬಾ ಅಜ್ಮತ್ 638, ಮೈನಾಕ್ ಕುಂದು 632, ಸೈಯದ್ ಹಮ್ದಾನ್ 629, ಪಠಾಣ್ ಸೋಹೆಲ್ ಖಾನ್ 628 ಹಾಗೂ ಅದೀಬ್ ಹಮೀದ್ 626 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ವಿಶೇಷವೆಂದರೆ, ಮೈನಾಕ್ ಕುಂದು, ಸೈಯದ್ ಹಮ್ದಾನ್, ಮೊಹಮ್ಮದ್ ಆದಿಲ್ ಫರಹಾನ್, ಫಿರ್ದುಸ್ ಮುಲ್ತಾನಿ ಹಾಗೂ ಸಯೀದ್ ಅಹಮ್ಮದ್ ಅವರು ಜೀವಶಾಸ್ತ್ರ ವಿಷಯದಲ್ಲಿ 360ಕ್ಕೆ 360 ಪೂರ್ಣ ಅಂಕ ಗಳಿಸಿದ್ದಾರೆ.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಮಾತನಾಡಿ, ಕಾಲೇಜಿನ 448 ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಸಿಗುವ ನಿರೀಕ್ಷೆಯಿದ್ದು, ಇದು ರಾಜ್ಯದ ಒಟ್ಟು ಸರ್ಕಾರಿ ವೈದ್ಯಕೀಯ ಸೀಟುಗಳಲ್ಲಿ ಶೇ.13ರಿಂದ 14ರಷ್ಟು ಹಾಗೂ ದೇಶದ ಸರ್ಕಾರಿ ವೈದ್ಯಕೀಯ ಸೀಟುಗಳಲ್ಲಿ ಸುಮಾರು ಶೇ.1ರಷ್ಟು ಪಾಲಾಗಲಿದೆ ಎಂದು ತಿಳಿಸಿದರು.
ಕಳೆದ 12 ವರ್ಷಗಳಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಡಿ 6 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸೀಟುಗಳನ್ನು ಪಡೆದಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಗುಣಮಟ್ಟದ ತರಬೇತಿ, ಅನುಭವಿ ಉಪನ್ಯಾಸಕರ ಮಾರ್ಗದರ್ಶನ, ಆಡಳಿತ ಮಂಡಳಿಯ ಬೆಂಬಲ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು.
ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಸಿಗದ ವಿದ್ಯಾರ್ಥಿಗಳು ನಿರಾಶರಾಗಬಾರದು. ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ವಿದೇಶದಲ್ಲೂ ಎರಡು ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಿದ್ದು, ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ವೈದ್ಯಕೀಯ ಶಿಕ್ಷಣದ ಅವಕಾಶ ಕಲ್ಪಿಸಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ, ನೀಟ್ ಮರುಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗಾಗಿ ಜುಲೈ 26ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರಾಜ್ಯದ ಶಾಹೀನ್ ಪದವಿಪೂರ್ವ ಕಾಲೇಜುಗಳಲ್ಲಿ ‘ಶಾಹೀನ್ ಪ್ರತಿಭಾನ್ವೇಷಣೆ ಪರೀಕ್ಷೆ’ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಬೋಧನಾ ಶುಲ್ಕ ವಿನಾಯಿತಿ ನೀಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ಕಲ್ಪಿಸಲಾಗಿದ್ದು, ಆಸಕ್ತರು ಈ ಅವಕಾಶದ ಪ್ರಯೋಜನ ಪಡೆಯುವಂತೆ ಅವರು ಮನವಿ ಮಾಡಿದರು.






