Bidar | ಅಂಬೇಡ್ಕರ್ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಿದ್ರಾಮ್ ಸಿಂಧೆ

ಬೀದರ್: ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಚಾರ-ವಿಚಾರ, ಆದರ್ಶಗಳು ಹಾಗೂ ಶಿಕ್ಷಣದ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ ಹೇಳಿದರು.
ಬಗದಲ್‌ನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಸತಿ ಶಾಲೆಯ ಸಂಯುಕ್ತಾಶ್ರಯದಲ್ಲಿ 2026-27ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಆಯೋಜಿಸಿದ್ದ ‘ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಂಡು ಜ್ಞಾನ ಸಂಪಾದಿಸಬೇಕು. ಶಿಕ್ಷಣದ ಮೂಲಕ ತಮ್ಮ ಬದುಕನ್ನು ರೂಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವಂತಹ ವ್ಯಕ್ತಿಗಳಾಗಬೇಕು ಎಂದು ಕರೆ ನೀಡಿದರು.
ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ್ ಮಾಳಗೆ ಉಪನ್ಯಾಸ ನೀಡಿ, ಪ್ರತಿಯೊಬ್ಬ ವ್ಯಕ್ತಿಯ ಜೀವನವೂ ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿಯಾಗಬೇಕು. ಶಿಕ್ಷಣ ಮತ್ತು ಓದಿನ ಮೂಲಕವೇ ಮಹತ್ತರ ಬದಲಾವಣೆ ಸಾಧ್ಯ ಎಂಬುದನ್ನು ಅಂಬೇಡ್ಕರ್ ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಅಂಬೇಡ್ಕರ್ ಅವರು ಶಿಕ್ಷಣ ಮತ್ತು ಓದಿಗೆ ಅತ್ಯಂತ ಮಹತ್ವ ನೀಡಿದ್ದು, ಜ್ಞಾನ ಸಂಪಾದನೆಯ ಮೂಲಕ ವ್ಯಕ್ತಿ ತನ್ನ ಬದುಕಿನ ಜೊತೆಗೆ ಇಡೀ ಸಮಾಜದ ದಿಕ್ಕನ್ನೇ ಬದಲಾಯಿಸಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹೇಶ್ ಗೋರನಾಳಕರ್, ಕಾಶೀನಾಥ್ ಗುಜ್ಜಗೆರೆ ಮಾತನಾಡಿದರು. ಚೆನ್ನಬಸವ ಹೇಡೆ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸುನೀಲ್ ಭಾವಿಕಟ್ಟಿ, ಗೌತಮ್ ಬಗದಲಕರ್ ಹಾಗೂ ಕ್ಲೈಮೆಂಟಿನಾ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರದೀಪ್ ನಿಡೋದೆ ಸ್ವಾಗತಿಸಿದರು. ಗೌತಮ್ ಕುದರೆ ನಿರೂಪಿಸಿದರು. ಸುವರ್ಣಾ ವಂದಿಸಿದರು.






