ಬೀದರ್ | ವಿಬಿ ಜಿ ರಾಮ್ ಜಿ ಮಸೂದೆ ಹಿಂಪಡೆದು ಮನರೇಗಾ ಪುನರ್‌ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

ಬೀದರ್ : ವಿಬಿ ಜಿ ರಾಮ್ ಜಿ ಮಸೂದೆಯನ್ನು ಹಿಂಪಡೆದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾನೂನು (ಮನರೇಗಾ)ಯನ್ನು ಪುನರ್‌ಸ್ಥಾಪಿಸಬೇಕು ಎಂದು ಆಗ್ರಹಿಸಿ ಮನರೇಗಾ ಉಳಿಸಿ ಆಂದೋಲನದ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಮನರೇಗಾ ಕಾರ್ಮಿಕರು, ವಿಬಿ ಜಿ ರಾಮ್ ಜಿ ಮಸೂದೆ ವಿರೋಧಿಸಿ ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರದಲ್ಲಿ, ಗ್ರಾಮೀಣ ಕಾರ್ಮಿಕರ ಉದ್ಯೋಗದ ಹಕ್ಕಾಗಿದ್ದ ಮನರೇಗಾ ಕಾನೂನನ್ನು ರದ್ದುಗೊಳಿಸಿ, ಉದ್ಯೋಗವನ್ನು ಕೇಂದ್ರ ಸರ್ಕಾರದ ಮರ್ಜಿಗೆ ಒಳಪಡಿಸುವ ಮೂಲಕ ಕಾರ್ಮಿಕರನ್ನು ಗುಲಾಮರನ್ನಾಗಿಸುವ ವಿಬಿ ಜಿ ರಾಮ್ ಜಿ ಕಾನೂನಿಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ತಿಳಿಸಲಾಗಿದೆ.
ಕನಿಷ್ಠ ವೇತನದ ಹಕ್ಕನ್ನು ಬದಿಗೊತ್ತಿ, ಕೇಂದ್ರ ಸರ್ಕಾರವೇ ನಿರ್ಧರಿಸುವ ವೇತನ ಹಾಗೂ ಕೆಲಸ ಕಾಮಗಾರಿಗಳ ಮೂಲಕ ವಲಸೆಯನ್ನು ಉತ್ತೇಜಿಸಿ, ಕಾರ್ಮಿಕರನ್ನು ಗುತ್ತಿಗೆದಾರರಿಗೆ ಅಗ್ಗದ ಕೂಲಿಗೆ ಪೂರೈಸುವ ಈ ಕಾನೂನನ್ನು ತಿರಸ್ಕರಿಸುತ್ತೇವೆ ಎಂದು ಅವರು ಹೇಳಿದರು. ಇದೇ ವೇಳೆ, ಜ.26ರಂದು ನಡೆದ ಗ್ರಾಮಸಭೆಯಲ್ಲಿ ಹೊಸ ಕಾನೂನು ವಿರೋಧಿಸಿ ಸರ್ವಾನುಮತದಿಂದ ಠರಾವು ಅಂಗೀಕರಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ ಬೇಡಿಕೆ ಆಧಾರಿತ, ಸಾರ್ವತ್ರಿಕ ಹಾಗೂ ಉದ್ಯೋಗದ ಹಕ್ಕು ಒದಗಿಸುವ ಮನರೇಗಾ ಕಾನೂನನ್ನು ಮರುಸ್ಥಾಪಿಸಬೇಕು ಹಾಗೂ ವಿಬಿ ಜಿ ರಾಮ್ ಜಿ ಕಾನೂನನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಪ್ನದೀಪಾ, ಗೀತಾ, ಸುಶೀಲಾ, ಸುರೇಖಾ, ರೇಷ್ಮಾ, ಲೋಕೇಶ್ ಸೇರಿದಂತೆ ನೂರಾರು ಕೂಲಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







