ಬೀದರ್ | ಬೆಳೆ ವಿಮೆಗೆ ಕೃಷಿ ಇಲಾಖೆಯಿಂದ ಅರಿವು ಮೂಡಿಸಿ : ಸಿದ್ರಾಮಯ್ಯಾ ಸ್ವಾಮಿ

ಬೀದರ್ : ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳಲು ಕೃಷಿ ಇಲಾಖೆಯಿಂದ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಸಿದ್ರಾಮಯ್ಯಾ ಸ್ವಾಮಿ ಅವರು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಜಿಲ್ಲೆಯ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿ ಇಲಾಖೆಯ ಎಲ್ಲಾ ಯೋಜನೆಗಳು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅನುಷ್ಠಾನವಾಗಬೇಕು. ರೈತರು ಕೇವಲ ಸೋಯಾ, ಅವರೆ ಬೆಳೆ ಬೆಳೆಯದೆ ಮಿಶ್ರಬೆಳೆ ಪದ್ದತಿ ಅನುಸರಿಸಬೇಕು ಎಂದರು.
ಸಿರಿಧಾನ್ಯ ಬೆಳೆಯುವ ರೈತರಿಗೆ ಸರಕಾರದ ಸಹಾಯಧನ ಇರುವುದರಿಂದ ಹೆಚ್ಚಿನ ರೈತರು ಇದರ ಸದುಪಯೋಗ ಪಡೆಯಬೇಕು. ರೈತರು ಡಿ.ಎ.ಪಿ ಗೊಬ್ಬರಕ್ಕೆ ಪರ್ಯಾಯ ಸಂಯುಕ್ತ ಗೊಬ್ಬರ ಬಳಕೆ ಹಾಗೂ ಯೂರಿಯಾ ಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೂ ಯುರಿಯಾ ಬಳಸುವುದು ಸೂಕ್ತ. ಈ ದಿಸೆಯಲ್ಲಿ ಕೃಷಿ ಇಲಾಖೆಯಿಂದ ಹಾಗೂ ತಾಲ್ಲೂಕು ಕೃಷಿಕ ಸಮಾಜದ ಘಟಕದಿಂದ ವ್ಯಾಪಕ ಪ್ರಚಾರ ಕೈಗೊಂಡು ರೈತರಿಗೆ ಸಂಯುಕ್ತ ಗೊಬ್ಬರ ಬಳಕೆ ಹಾಗೂ ನ್ಯಾನೂ ಯುರಿಯಾ ಬಳಸಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ದೇವಿಕಾ ಆರ್., ಕೃಷಿ ಅಧಿಕಾರಿ ಕೈಲಾಸನಾಥ್, ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಉಮಾಕಾಂತ್, ಖಜಾಂಚಿ ಗೋವಿಂದ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಸಂಗಮೇಶ್ ವಾಲೆ, ರಾಜ್ಯ ಪ್ರತಿನಿಧಿ ಹಾಗೂ ಸದಸ್ಯ ವಿಶ್ವನಾಥ್ ಪಾಟೀಲ್, ಜನವಾಡ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಉಮೇಶ್, ಡಾ.ಭವಾನಿ ಹಾಗೂ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.







