ಬೀದರ್ | ಬೆಳೆ ಹಾನಿ ಪರಿಹಾರ ಬಿಡುಗಡೆಗೆ ಮಾಡಲು ಅಖಿಲ ಭಾರತ ಕಿಸಾನ್ ಸಭಾ ಮನವಿ

ಬೀದರ್ : ಈ ವರ್ಷ ಹೆಚ್ಚು ಮಳೆಯಾಗಿ ತುಂಬಾ ಬೆಳೆ ಹಾನಿಯಾಗಿದ್ದು, ತಕ್ಷಣವೇ ಬೆಳೆ ಹಾನಿಯ ಪರಿಹಾರ ಹಣ ಬಿಡುಗಡೆಗೆ ಮಾಡಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಮನವಿ ಮಾಡಿದೆ.
ಇಂದು ಬಸವಕಲ್ಯಾಣದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಪ್ರಸಕ್ತ ಸಾಲಿನ ಆರಂಭದಿಂದಲೇ ಹವಾಮಾನ ವೈಪರಿತ್ಯಯಿಂದಾಗಿ ರೈತರು ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ತಮ್ಮ ಜಮೀನಿನಲ್ಲಿ ಬೆಳೆದ ಫಸಲು ಸಂಪೂರ್ಣವಾಗಿ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಆದ್ದರಿಂದ ನಾಡಿನ ರೈತರು ತುಂಬಾನೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಲಾಗಿದೆ.
ಬೆಳೆ ಹಾನಿಯಿಂದಾಗಿ ಮುಂದೇನು ಎಂಬ ಚಿಂತೆಯಲ್ಲಿ ತಮ್ಮ ಕಷ್ಟವು ಬೇರೆಯವರ ಬಳಿ ಹೇಳಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ರೈತರು ನಿತ್ರಾಣಗೊಂಡಿದ್ದಾರೆ. ನಿರಂತರ ಮಳೆ ಬೀಳುತ್ತಿರುವುದರಿಂದ ಹಿಂಗಾರು ಬೆಳೆ ಕೂಡ ಬೆಳೆಯುವ ಸಾಧ್ಯವಿಲ್ಲದ ಪರಿಸ್ಥಿತಿಗೆ ತಲುಪಿದ್ದಾರೆ. ಸದ್ಯ ರೈತರ ಸ್ಥಿತಿ ನಾಡಿ ಸತ್ತ ರೋಗಿಗಳಂತಾಗಿದೆ. ಆದ್ದರಿಂದ ಆದಷ್ಟು ಬೇಗ ಬೆಳೆ ನಷ್ಟ ಪರಿಹಾರ ಒದಗಿಸಿ, ಅವಸಾನದ ಅವಸ್ಥೆಯಲ್ಲಿರುವ ರೈತರ ಕೈ ಹಿಡಿಯಬೇಕು ಎಂದು ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ತಾಲೂಕು ಅಧ್ಯಕ್ಷ ಸೂರ್ಯಕಾಂತ್ ಮದಕಟ್ಟಿ, ರಾಮಯ್ಯ ಮಠಪತಿ, ಇಬ್ರಾಹಿಂ ಸಾಬ್, ಸಿಂಧು ಮಾನೆ, ರವೀಂದ್ರ ನಲಕಟ್ಟೆ, ಮೋತಿರಾಮ್ ಸೂರ್ಯವಂಶಿ, ನಂದಾಬಾಯಿ ಭಕ್ಷಿ, ಶಿವರಾಜ್ ಬಕ್ಕೆ, ಮೋಹನ್ ಬಿರಾದಾರ್, ಮಹಾದೇವ್, ಬಾಬುರಾವ್, ಸಾವನಕುಮಾರ್ ಹಾಗೂ ಮಹಮ್ಮದ್ ಸಾಬ್ ಸೇರಿದಂತೆ ಅನೇಕರು ಇದ್ದರು.







