Bidar | ಬ್ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ಆರೋಪ : 7 ಮಂದಿಯ ಬಂಧನ

ಬೀದರ್ : ಬ್ರಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವ ವೈದ್ಯರೊಬ್ಬರ ಮೇಲೆ ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಡೆದಿದ್ದು, ಪ್ರಕರಣ ಸಂಬಂಧ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಾಜಲಾಪುರ್ ಗ್ರಾಮದ ಆದಿತ್ಯ ಗುಮ್ಮಳ (21), ಬಾಲಾಜಿ ಗುಮ್ಮಳ (23), ಚಾಂಬೋಳ್ ಗ್ರಾಮದ ವಿನೋದ್ ಕೋಳಿ (26), ಪವನ್ ಕೋಳಿ (25), ಬೆನಕನಳ್ಳಿಯ ಗೋವಿಂದ್ ಚೌವ್ಹಾಣ್ (28), ಮಹಾದೇವ್ ಚೌವ್ಹಾಣ್ (23) ಹಾಗೂ ಮಹಾರಾಷ್ಟ್ರದ ಲಾತುರ್ ಜಿಲ್ಲೆಯ ಅನಿಲ್ ಕಚವೆ (25) ಬಂಧಿತ ಆರೋಪಿಗಳಾಗಿದ್ದಾರೆ.
ಬೆನಕನಳ್ಳಿ ಗ್ರಾಮದ ಯುವಕನೊಬ್ಬ ಬೈಕ್ ಮೇಲಿಂದ ಬಿದ್ದ ಹಿನ್ನೆಲೆ ಗಾಯಾಳುವನ್ನು ಗುರುವಾರ ತಡರಾತ್ರಿ ಸುಮಾರು 1 ಗಂಟೆಗೆ ಬ್ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿತ್ತು. ಈ ವೇಳೆ ಎಂಎಲ್‌ಸಿ ಮಾಡದೇ ಚಿಕಿತ್ಸೆ ನೀಡುವಂತೆ ಯುವಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಕರ್ತವ್ಯದಲ್ಲಿದ್ದ ಡಾ.ತುಕಾರಾಮ್ ಅವರು ಪ್ರಾಥಮಿಕ ಚಿಕಿತ್ಸೆ ನೀಡಿ ಸ್ಕ್ಯಾನಿಂಗ್‌ಗೆ ಕಳುಹಿಸಿದ್ದರೂ, ಮದ್ಯದ ಅಮಲಿನಲ್ಲಿದ್ದ ಯುವಕರ ಗುಂಪು “ಎಂಎಲ್‌ಸಿ ಯಾಕೆ ಮಾಡಿದ್ದೀರಿ” ಎಂದು ಪ್ರಶ್ನಿಸಿ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡ ವೈದ್ಯರಿಗೆ ಬ್ರಿಮ್ಸ್ ಆಸ್ಪತ್ರೆಯ ಎಸ್‌ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ನಗರದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವೈದ್ಯರಿಂದ ಪ್ರತಿಭಟನೆ :
ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ಶುಕ್ರವಾರ ಬ್ರಿಮ್ಸ್ ಆಸ್ಪತ್ರೆ ಎದುರು ವೈದ್ಯರು ಪ್ರತಿಭಟನೆ ನಡೆಸಿದರು.
ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ವೈದ್ಯರ ಮೇಲೆ ಹಲ್ಲೆ ನಡೆಸುವ ಘಟನೆಗಳನ್ನು ಸಹಿಸುವುದಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.






