ಬೀದರ್ | ದಲಿತರ ರುದ್ರಭೂಮಿ ಒತ್ತುವರಿ ಆರೋಪ : ಪ್ರತಿಭಟನೆ

ಬೀದರ್ : ದಲಿತರಿಗೆ ಸೇರಿದ ರುದ್ರಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಬೀದರ್ ತಾಲೂಕಿನ ಸಂಗೋಳಗಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಂಗೋಳಗಿ ಗ್ರಾಮದ ದಲಿತರಿಗೆ ಸೇರಿದೆ ಎನ್ನಲಾದ ರುದ್ರಭೂಮಿ ಹತ್ತಿರ ಪ್ರತಿಭಟನೆ ನಡೆಸಿದರು.
ತಹಶೀಲ್ದಾರ್ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಸುಮಾರು 25 ವರ್ಷಗಳಿಂದ ಈ ಭೂಮಿ ನಾವು ರುದ್ರಭೂಮಿಯಾಗಿ ಬಳಸುತ್ತಿದ್ದೇವೆ. ನಾವು ಕಾರಂಜಾ ಸಂತ್ರಸ್ತರಾದ್ದರಿಂದ ನಮಗೆ 1 ಗುಂಟೆ ಕೂಡ ಭೂಮಿ ಇಲ್ಲ. ಆದರೆ ಇವಾಗ ಊರಿನ ಕೆಲವರು ಬಂದು ನಮ್ಮ ರುದ್ರಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ಈ ಭೂಮಿ ಅವರಿಗೆ ಸೇರಿದ್ದು ಎಂದು ಹೇಳಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಅವರು ಭೂಮಿಯಯನ್ನು ಅಳೆದು ಸರ್ವೇ ಮಾಡಿ, ಯಾವ ಭೂಮಿ ಎಲ್ಲಿದೆ ಎಂದು ತಿಳಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Next Story





