Bidar | ಕುಂಬಾರವಾಡದ ಸರಕಾರಿ ಜಮೀನು ಅತಿಕ್ರಮಣ ಆರೋಪ : ಕ್ರಮಕ್ಕಾಗಿ ಆಗ್ರಹ

ಬೀದರ್: ನಗರದ ಕುಂಬಾರವಾಡ ಬಡಾವಣೆಯಲ್ಲಿರುವ ಸರ್ಕಾರಿ ಗೈರಾಣ ಜಮೀನು ಹಾಗೂ ಖಾಸಗಿ ಜಮೀನುಗಳನ್ನು ಅತಿಕ್ರಮಿಸುವ ಉದ್ದೇಶದಿಂದ ಕೆಲವರು ಜಾತಿ ಮತ್ತು ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕುಂಬಾರವಾಡದ ಕ್ರಿಶ್ಚಿಯನ್ ಸಮುದಾಯದ ಮಹಿಳೆಯರು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ, ಸುಮಾರು 50 ವರ್ಷಗಳಷ್ಟು ಹಳೆಯ ನೀರಿನ ಟ್ಯಾಂಕ್ ಹಾಗೂ ಬೋರ್‌ವೆಲ್ ಇರುವ ಸರ್ಕಾರಿ ಜಮೀನು ಈ ಭಾಗದ ನೂರಾರು ಕುಟುಂಬಗಳಿಗೆ ಪ್ರಮುಖ ಕುಡಿಯುವ ನೀರಿನ ಮೂಲವಾಗಿದೆ ಎಂದು ತಿಳಿಸಿದ್ದಾರೆ.
1972ರ ಬರಗಾಲದ ಸಂದರ್ಭದಲ್ಲಿ ಸರ್ಕಾರ ನಾಲ್ಕು ಬೋರ್‌ವೆಲ್‌ಗಳನ್ನು ಮಂಜೂರು ಮಾಡಿದ್ದು, ಅವುಗಳಲ್ಲಿ ಒಂದನ್ನು ಇದೇ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು. ಇತ್ತೀಚೆಗೆ ಮಹಾನಗರ ಪಾಲಿಕೆಯಿಂದ ಮತ್ತೊಂದು ಬೋರ್‌ವೆಲ್ ಅಳವಡಿಸಲಾಗಿದ್ದು, ಇಂದಿಗೂ ಸ್ಥಳೀಯ ನಿವಾಸಿಗಳು ಅಲ್ಲಿಂದಲೇ ನೀರು ಪಡೆಯುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಮೇ 18ರಂದು ಮುಂಜಾನೆ ಕೆಲ ಕಿಡಿಗೇಡಿಗಳು ಆ ಸರ್ಕಾರಿ ಜಾಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ನೀಲಿ ಧ್ವಜ ಅಳವಡಿಸಿ ಉದ್ವಿಗ್ನ ವಾತಾವರಣ ನಿರ್ಮಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಧ್ವಜ ತೆರವುಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ಮನವಿದಾರರು ತಿಳಿಸಿದ್ದಾರೆ.
ಕುಂಬಾರವಾಡದಲ್ಲಿ ಈಗಾಗಲೇ ಅಂಬೇಡ್ಕರ್ ಸಮುದಾಯ ಭವನ, ಗೌತಮ ಬುದ್ಧ ಭವನ ಸೇರಿದಂತೆ ಹಲವು ಸೌಲಭ್ಯಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 50 ವರ್ಷಗಳಿಂದ ಅಂಬೇಡ್ಕರ್ ಜಯಂತಿ ಹಾಗೂ ಮಹಾಪರಿನಿರ್ವಾಣ ದಿನದ ಕಾರ್ಯಕ್ರಮಗಳನ್ನು ಅಲ್ಲಿ ಆಚರಿಸಲಾಗುತ್ತಿದೆ. ಆದರೂ ಸಮುದಾಯ ಭವನದ ನೆಪದಲ್ಲಿ ಕೆಲವರು ಸರ್ಕಾರಿ ಜಮೀನಿನ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಜಾತಿ ಮತ್ತು ಕೋಮು ಉದ್ವಿಗ್ನತೆ ಸೃಷ್ಟಿಸಿ ಸರ್ಕಾರಿ ಹಾಗೂ ಖಾಸಗಿ ಜಮೀನುಗಳನ್ನು ಅತಿಕ್ರಮಿಸಲು ಯತ್ನಿಸುತ್ತಿರುವವರ ವಿರುದ್ಧ ಸಮಗ್ರ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದಲ್ಲದೆ, ಅಲ್ಲಿರುವ ಹಳೆಯ ನೀರಿನ ಟ್ಯಾಂಕ್ ಮತ್ತು ಬೋರ್‌ವೆಲ್ ಪ್ರದೇಶವನ್ನು ಸಾರ್ವಜನಿಕ ಬಳಕೆಗೆ ಕಾಯ್ದಿರಿಸಿ, ಅದೇ ಜಾಗದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಸ್ಥಾಪಿಸುವ ಮೂಲಕ ಸ್ಥಳೀಯ ಜನರಿಗೆ ಆರೋಗ್ಯ ಸೇವೆ ಒದಗಿಸಬೇಕು ಎಂದು ಮಹಿಳೆಯರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ನೈನಕುಮಾರಿ, ಶಾಂತಮ್ಮ, ಸುಂದ್ರಮ್ಮ, ತುಳಜಮ್ಮ, ಶಾರದಮ್ಮ, ಅಂಬಿಕಾ, ಲಲಿತಾ, ಪಾರ್ವತಿ, ನರಸಮ್ಮ, ಲಕ್ಷ್ಮೀ, ಸುನಿತಾ, ಸಂಗೀತಾ, ರೇಷ್ಮಾ, ಪಾರ್ವತಿ ಹಾಗೂ ಪುಷ್ಪ ಸೇರಿದಂತೆ ಇತರರು ಇದ್ದರು.






