Bidar | ಸಂಗೋಳಗಿ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಸಿಬ್ಬಂದಿ ಗೈರು ಆರೋಪ: ಕ್ರಮಕ್ಕೆ ಆಗ್ರಹ

ಬೀದರ್: ಭಾಲ್ಕಿ ತಾಲ್ಲೂಕಿನ ಸಂಗೋಳಗಿ ಗ್ರಾಮದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ನಿಯಮಿತವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಇದರಿಂದ ಗ್ರಾಮಸ್ಥರು ಸಮರ್ಪಕ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಕನ್ನಡಿಗರ ವೇದಿಕೆ ಆರೋಪಿಸಿದೆ.
ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ, ಸಂಗೋಳಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬಡವರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗೆ ಈ ಸರ್ಕಾರಿ ಆರೋಗ್ಯ ಕೇಂದ್ರವೇ ಪ್ರಮುಖ ಆಶ್ರಯವಾಗಿದೆ. ಆದರೆ, ವೈದ್ಯರು ಹಾಗೂ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದಿರುವುದರಿಂದ ಚಿಕಿತ್ಸೆಗಾಗಿ ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಲಾಗಿದೆ.
ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ. ತುರ್ತು ಸಂದರ್ಭದಲ್ಲಿ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಅಥವಾ ಅಗತ್ಯ ಸಿಬ್ಬಂದಿ ಲಭ್ಯವಿಲ್ಲದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆರೋಗ್ಯ ಕೇಂದ್ರದ ಕಾರ್ಯನಿರ್ವಹಣೆ ಕುರಿತು ಸಮಗ್ರ ಪರಿಶೀಲನೆ ನಡೆಸಿ, ವೈದ್ಯರು ಹಾಗೂ ಸಿಬ್ಬಂದಿ ನಿಯಮಿತವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು. ಕರ್ತವ್ಯಲೋಪ ಕಂಡುಬಂದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಸಹಿಸುವುದಿಲ್ಲ. ಗ್ರಾಮೀಣ ಜನರಿಗೆ ಸರ್ಕಾರದ ಆರೋಗ್ಯ ಸೇವೆ ಸಮರ್ಪಕವಾಗಿ ತಲುಪಬೇಕು. ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ವೇದಿಕೆ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಸ್ತುವಾರಿ ಹಾಗೂ ಜಿಲ್ಲಾಧ್ಯಕ್ಷ ಕೇತನ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಕುಮಾರ್, ಸಾಯಿಕುಮಾರ್, ಯುವ ಘಟಕದ ಅಧ್ಯಕ್ಷ ಸಂಗಮೇಶ್, ಗೌರವಾಧ್ಯಕ್ಷ ಹಾಗೂ ಕಾರ್ಯದರ್ಶಿ ನಾಗೇಶ್ ಉಪಸ್ಥಿತರಿದ್ದರು.






