Bidar | ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಅನ್ಯಾಯ ಆರೋಪ : ಮನ್ನಾಏಖೇಳ್ಳಿಯಲ್ಲಿ ಪ್ರತಿಭಟನೆ

ಬೀದರ್: ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಪರಿಶಿಷ್ಟ ಜಾತಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಕ್ಷೇತ್ರದ ಆರು ಜಿಲ್ಲಾ ಪಂಚಾಯಿತಿ ಸ್ಥಾನಗಳಲ್ಲಿ ಒಂದನ್ನೂ ಪರಿಶಿಷ್ಟ ಜಾತಿಗೆ ಮೀಸಲಿಡದೆ ವಂಚಿಸಲಾಗಿದೆ ಎಂದು ಆರೋಪಿಸಿ, ಜಿಲ್ಲಾ ಪಂಚಾಯಿತಿ ಎಸ್ಸಿ ಮೀಸಲಾತಿ ಹೋರಾಟ ಸಮಿತಿಯ ವತಿಯಿಂದ ಶುಕ್ರವಾರ ಮನ್ನಾಏಖೇಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಷ್ಟ್ರೀಯ ಹೆದ್ದಾರಿ 65ರ ಮೀನಕೇರಾ ಕ್ರಾಸ್ನಿಂದ ಮನ್ನಾಏಖೇಳ್ಳಿಯ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಹೋರಾಟಗಾರರು, ಪರಿಶಿಷ್ಟ ಜಾತಿಗೆ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿದರು.
ಚಿಟಗುಪ್ಪದ ತಹಸೀಲ್ದಾರ್ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗೆ ಸಲ್ಲಿಸಿದ ಮನವಿಯಲ್ಲಿ, ಬೀದರ್ ದಕ್ಷಿಣ ಕ್ಷೇತ್ರದ ಔರಾದ್ (ಎಸ್), ನಿರ್ಣಾ, ಬೇಮಳಖೇಡಾ, ಬಗದಲ್, ಕಮಠಾಣಾ ಹಾಗೂ ಮನ್ನಳ್ಳಿ ಸೇರಿದಂತೆ ಒಟ್ಟು ಆರು ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ಮೀಸಲಾತಿ ಘೋಷಿಸಲಾಗಿದೆ. ಇವುಗಳಲ್ಲಿ ಐದು ಸ್ಥಾನಗಳನ್ನು ಸಾಮಾನ್ಯ ಹಾಗೂ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಿಡಲಾಗಿದ್ದು, ಒಂದು ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ನಿಗದಿಪಡಿಸಲಾಗಿದೆ. ಆದರೆ ಪರಿಶಿಷ್ಟ ಜಾತಿಯವರಿಗೆ ಒಂದೂ ಸ್ಥಾನ ಮೀಸಲಿಡದೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಬೀದರ್ ದಕ್ಷಿಣ ಕ್ಷೇತ್ರದ ಜಿಲ್ಲಾ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿಯವರಿಗೂ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಮಿತಿಯ ಮುಖಂಡರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಎಸ್ಸಿ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರಾಘವೇಂದ್ರ ಕಿರಣ್, ಉಪಾಧ್ಯಕ್ಷ ವೀರಾಶೆಟ್ಟಿ ಬಂಬುಳಗಿ, ಗೌರವಾಧ್ಯಕ್ಷ ತಿಪ್ಪಣ್ಣ ವಾಲಿ, ಪ್ರಕಾಶ್ ಬಗದಲ್, ಅಂಬಾದಾಸ್ ಸೋನಿ, ರಾಜಕುಮಾರ್ ಜ್ಯೋತಿ, ರಾಜಕುಮಾರ್ ಸಿಂಧೆ, ದಿಲೀಪಕುಮಾರ್ ವರ್ಮಾ, ಗೌತಮ್ ಬಗದಲಕರ್, ರಾಹುಲ್ ಖಂದಾರೆ ಹಾಗೂ ಕಪಿಲ್ ಗೋಡಬೊಲೆ ಸೇರಿದಂತೆ ನೂರಾರು ಮಹಿಳೆಯರು ಮತ್ತು ಯುವಕರು ಉಪಸ್ಥಿತರಿದ್ದರು.






