ಬೀದರ್ | ಅಧಿಕಾರಿಗಳಿಂದ ಬೆದರಿಕೆ ಆರೋಪ : ಭಾಲ್ಕಿ ಪುರಸಭೆ ಸದಸ್ಯ ಪಾಂಡುರಂಗ್ ಕನಸೆ ರಾಜೀನಾಮೆ

ಬೀದರ್ : ಭಾಲ್ಕಿ ಪುರಸಭೆಯ ವಾರ್ಡ್ ನಂ.21 ರ ಸದಸ್ಯ ಪಾಂಡುರಂಗ್ ಕನಸೆ ಅವರು, ಅಧಿಕಾರಿಗಳಿಂದ ತಮಗೆ ವೈಯಕ್ತಿಕ ಬೆದರಿಕೆ ಬರುತ್ತಿದೆ ಎಂದು ಆರೋಪಿಸಿ ರಾಜೀನಾಮೆ ನೀಡಿದ್ದಾರೆ.
ಬುಧವಾರ ಅವರು ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಾರ್ಡ್‌ನಲ್ಲಿ ನಡೆಯುತ್ತಿರುವ ಎಲ್ಲ ಕೆಲಸಗಳಿಗೆ ಅಡ್ಡಿಪಡಿಸಲಾಗುತ್ತಿದೆ. ನನ್ನ ಮನೆ ಕೆಡವುದಾಗಿ ವೈಯಕ್ತಿಕವಾಗಿ ಬೆದರಿಕೆ ಹಾಕಲಾಗಿದೆ. ಇದರಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ನನ್ನ ರಾಜೀನಾಮೆ ಪತ್ರವನ್ನು ನೀಡಿದ್ದೇನೆ ಎಂದು ಹೇಳಿದರು.
ನನ್ನ ರಾಜೀನಾಮೆಯೊಂದಿಗೆ ಪುರಸಭೆಯಲ್ಲಿ ನಡೆದ ಎಲ್ಲ ದಾಖಲೆಗಳನ್ನು ಕೂಡ ಸೇರಿಸಿದ್ದೇನೆ. ಜಿಲ್ಲಾಧಿಕಾರಿಗಳು ನನ್ನ ರಾಜೀನಾಮೆಯನ್ನು ಅಂಗೀಕರಿಸಿ, ಮುಂದಿನ ದಿನಗಳಲ್ಲಿ ನನ್ನ ವಾರ್ಡ್‌ನ ಜನರ ಕೆಲಸಗಳನ್ನು ಸ್ವತಃ ನಿರ್ವಹಿಸಬೇಕು ಎಂಬ ನನ್ನ ಮನವಿ ಇದೆ ಎಂದರು.
ಪುರಸಭೆ ಅಧಿಕಾರಿ ಸಂಗಮೇಶ್ ಕಾರಬಾರಿ ಅವರು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದು, 14ನೇ ಮತ್ತು 15ನೇ ಹಣಕಾಸು ಆಯೋಗದ ನಿಧಿಗಳು ಹಾಗೂ ಎಸ್‌ಎಫ್‌ಸಿ ನಿಧಿಗಳ ದುರುಪಯೋಗ ಮಾಡಿದ್ದಾರೆ. ಈ ಮೂಲಕ ಸರ್ಕಾರಕ್ಕೂ ನಷ್ಟ ಉಂಟುಮಾಡಿದ್ದಾರೆ. ಇವರ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದರು.
ನನ್ನ ವಾರ್ಡ್‌ನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ಮಾಡಲು ಬಿಡುತ್ತಿಲ್ಲ. ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಮನೆ ಕೆಡವಲು ನೋಟಿಸ್ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಮಾಹಿತಿ ಕೇಳಿದರೂ ನೀಡುವುದಿಲ್ಲ. ಕಳೆದ ಎರಡು ವರ್ಷಗಳಿಂದ ಸಾಮಾನ್ಯ ಸಭೆ (ಜಿಬಿ ಮೀಟಿಂಗ್) ನಡೆಸಿಲ್ಲ. ಮೀಟಿಂಗ್ ನಡೆಸುವಂತೆ ಕೇಳಿದಾಗ ಹೆದರಿಸುತ್ತಿದ್ದಾರೆ ಎಂದು ಕನಸೆ ಗಂಭೀರ ಆರೋಪ ಮಾಡಿದರು.







