Bidar | ಚಾಂದೋರಿ ಗ್ರಾಪಂನಲ್ಲಿ ಅವ್ಯವಹಾರ ಆರೋಪ : ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

ಬೀದರ್: ಕಮಲನಗರ ತಾಲೂಕಿನ ಚಾಂದೋರಿ ಗ್ರಾಮ ಪಂಚಾಯತಿಯಲ್ಲಿ ಕಳೆದ ಜೂನ್ ತಿಂಗಳಲ್ಲಿ ಒಬ್ಬನೇ ವ್ಯಕ್ತಿಯ ಖಾತೆಗೆ 20 ಲಕ್ಷ ರೂ. ಗೂ ಅಧಿಕ ಹಣ ಜಮೆಯಾಗಿರುವ ಕುರಿತು ವರದಿಗಳು ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತನಿಖೆಗೆ ಆದೇಶಿಸಿದ್ದಾರೆ.
ಈ ಸಂಬಂಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಲಿಖಿತ ನಿರ್ದೇಶನ ನೀಡಿರುವ ಸಚಿವರು, ಇದೇ ರೀತಿಯ ಆರೋಪ ಕೋರೆಕಲ್ ಗ್ರಾಮ ಪಂಚಾಯತಿಯಲ್ಲಿ ಕೂಡ ಕೇಳಿಬಂದಿದ್ದು, ಅಲ್ಲಿ ಒಬ್ಬನೇ ವ್ಯಕ್ತಿಯ ಖಾತೆಗೆ 6 ಲಕ್ಷ ರೂ. ಗೂ ಅಧಿಕ ಹಣ ವರ್ಗಾವಣೆಯಾಗಿದೆ ಎಂಬ ದೂರು ಇದೆ ಎಂದು ತಿಳಿಸಿದ್ದಾರೆ.
ಉಪ ಕಾರ್ಯದರ್ಶಿ ದರ್ಜೆಯ ಅಧಿಕಾರಿಯ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಎರಡೂ ಗ್ರಾಮ ಪಂಚಾಯತಿಗಳಲ್ಲಿ ನಡೆದಿರುವ ಹಣ ವರ್ಗಾವಣೆಯ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ತನಿಖೆ ಪೂರ್ಣಗೊಳಿಸಿ ಏಳು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ, ವಿಶೇಷವಾಗಿ ಚಾಂದೋರಿ ಮತ್ತು ಕೋರೆಕಲ್ ಗ್ರಾಮ ಪಂಚಾಯತಿಗಳಲ್ಲಿ ಒಬ್ಬನೇ ವ್ಯಕ್ತಿಯ ಖಾತೆಗೆ ಹಣ ಜಮೆ ಮಾಡುವ ರೀತಿಯ ಯಾವುದೇ ಅವ್ಯವಹಾರ ನಡೆದಿದೆಯೇ ಎಂಬುದನ್ನು ಪರಿಶೀಲಿಸಬೇಕು. ವಾಸ್ತವಾಂಶಗಳೊಂದಿಗೆ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕೈಗೊಳ್ಳಬೇಕಾದ ಶಿಸ್ತು ಕ್ರಮದ ಶಿಫಾರಸು ಸೇರಿಸಿ ವರದಿ ಸಲ್ಲಿಸುವಂತೆ ಸಚಿವ ಈಶ್ವರ್ ಖಂಡ್ರೆ ನಿರ್ದೇಶನ ನೀಡಿದ್ದಾರೆ.






