Bidar | ‘ಕೃಷಿ ಭಾಗ್ಯ’ ಯೋಜನೆಯಲ್ಲಿ ಅವ್ಯವಹಾರ ಆರೋಪ: ಸಮಗ್ರ ತನಿಖೆಗೆ ವೀರ ಕನ್ನಡಿಗ ಸೇನೆ ಆಗ್ರಹ

ಬೀದರ್: ತಾಲೂಕಿನ ಎಸ್ಸಿ ಹಾಗೂ ಎಸ್ಟಿ ರೈತರಿಗೆ ‘ಕೃಷಿ ಭಾಗ್ಯ’ ಯೋಜನೆಯಡಿ ಕೃಷಿ ಹೊಂಡಗಳನ್ನು ಮಂಜೂರು ಮಾಡುವಲ್ಲಿ ಭಾರೀ ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ರೈತರ ಹೆಸರಿನಲ್ಲಿ ನಡೆದಿರುವ ಅಕ್ರಮಗಳ ಕುರಿತು ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ವೀರ ಕನ್ನಡಿಗ ಸೇನೆ ಆಗ್ರಹಿಸಿದೆ.
ಈ ಕುರಿತು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಮಂಗಳವಾರ ಸಲ್ಲಿಸಿದ ಮನವಿಯಲ್ಲಿ, ಅರ್ಹ ರೈತರಿಗೆ ಸರ್ಕಾರದ ಯೋಜನೆಯ ಸೌಲಭ್ಯ ದೊರೆಯಬೇಕಾಗಿದ್ದರೂ, ಯೋಜನೆಯ ಅನುಷ್ಠಾನದಲ್ಲಿ ಅಕ್ರಮಗಳು ನಡೆದಿವೆ ಎಂಬ ದೂರುಗಳು ಕೇಳಿಬಂದಿವೆ ಎಂದು ಆರೋಪಿಸಲಾಗಿದೆ.
ರೈತರ ಹೆಸರಿನಲ್ಲಿ ನಡೆದಿರುವ ಅಕ್ರಮ ಹಾಗೂ ಅವ್ಯವಹಾರಗಳ ಕುರಿತು ತಕ್ಷಣ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅರ್ಹ ಎಸ್ಸಿ, ಎಸ್ಟಿ ರೈತರಿಗೆ ‘ಕೃಷಿ ಭಾಗ್ಯ’ ಯೋಜನೆಯ ಸೌಲಭ್ಯವನ್ನು ನ್ಯಾಯಯುತವಾಗಿ ಒದಗಿಸಬೇಕು. ಫಲಾನುಭವಿಗಳ ಆಯ್ಕೆ ಹಾಗೂ ಕೃಷಿ ಹೊಂಡಗಳ ಮಂಜೂರಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
‘ಕೃಷಿ ಭಾಗ್ಯ’ ಯೋಜನೆಯಲ್ಲಿನ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವೀರ ಕನ್ನಡಿಗ ಸೇನೆ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷ ಬಡಿಗೇರ್ ಈಶ್ವರ್, ಜಿಲ್ಲಾಧ್ಯಕ್ಷ ಅಮರ್ ಪೂಜಾರಿ, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಗೋವಿಂದ್ ಬಡಿಗೇರ್, ಜಿಲ್ಲಾ ಉಪಾಧ್ಯಕ್ಷ ರಾಜಕುಮಾರ್ ಹಾಗೂ ಸಂತೋಷ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದುರು.






