Bidar | ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಅವ್ಯವಹಾರ ಆರೋಪ: ಸಮಗ್ರ ತನಿಖೆಗೆ ಆಗ್ರಹ

ಬೀದರ್: ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕ್ರೈಸ್ತ ಜನರ ಒಕ್ಕೂಟ ಹಾಗೂ ರೆಡ್ ಆರ್ಮಿ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಕ್ರೈಸ್ತ ಸಮುದಾಯದ ಚರ್ಚ್ಗಳ ದುರಸ್ತಿ, ಸಮುದಾಯ ಭವನಗಳ ನಿರ್ಮಾಣ, ಚರ್ಚ್ ಆವರಣ ಗೋಡೆ, ಕ್ರೈಸ್ತ ಸ್ಮಶಾನಗಳ ಆವರಣ ಗೋಡೆ ಹಾಗೂ ವೃದ್ಧಾಶ್ರಮ ಮತ್ತು ಅನಾಥಾಶ್ರಮಗಳ ಅಭಿವೃದ್ಧಿಗಾಗಿ ಸರ್ಕಾರ ಅನುದಾನ ಮಂಜೂರು ಮಾಡಿದೆ. ಆದರೆ, ಈ ಅನುದಾನದಿಂದ ಕೈಗೊಂಡ ಕಾಮಗಾರಿಗಳಲ್ಲಿ ಕಳಪೆ ಕೆಲಸ ಮಾಡಲಾಗಿದೆ ಹಾಗೂ ನಕಲಿ ಅಥವಾ ವಾಸ್ತವಕ್ಕೆ ಹೊಂದಿಕೆಯಾಗದ ಬಿಲ್ಗಳನ್ನು ಸೃಷ್ಟಿಸಿ ಸರ್ಕಾರಿ ಹಣ ದುರ್ಬಳಕೆ ಮಾಡಲಾಗಿದೆ ಎಂಬ ಗಂಭೀರ ದೂರುಗಳಿವೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸರ್ಕಾರವು ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದ ಅಭಿವೃದ್ಧಿಗಾಗಿ ನೀಡುವ ಅನುದಾನ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಅನುದಾನದ ಬಳಕೆಯಲ್ಲಿ ಅಕ್ರಮಗಳು ನಡೆದಿದ್ದರೆ, ಇದರಿಂದ ಸಮುದಾಯಕ್ಕೆ ಅನ್ಯಾಯವಾಗುವುದರ ಜತೆಗೆ ಸರ್ಕಾರಿ ಹಣವೂ ದುರ್ಬಳಕೆಯಾಗುತ್ತದೆ. ಆದ್ದರಿಂದ, ಸ್ಥಳೀಯ ತಹಶೀಲ್ದಾರ್ ಹಾಗೂ ಪೊಲೀಸರಿಗೆ ನಿರ್ದೇಶನ ನೀಡಿ, ಅಕ್ರಮ ಕಟ್ಟಡ ನಿರ್ಮಾಣ ನಡೆಯುತ್ತಿದೆ ಎನ್ನಲಾದ ಸ್ಥಳವನ್ನು ತಕ್ಷಣ ಜಪ್ತಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮೌಲ್ಯಮಾಪನ ದಾಖಲೆಗಳಿಗೆ ವಂಚನಾತ್ಮಕವಾಗಿ ಸಹಿ ಮಾಡಿರುವುದು ಹಾಗೂ ಕಾನೂನುಬಾಹಿರವಾಗಿ ಅನುದಾನದ ಹಣ ಬಿಡುಗಡೆ ಮಾಡಿರುವ ಆರೋಪಗಳ ಕುರಿತು ಸಂಪೂರ್ಣ ಕ್ರಿಮಿನಲ್ ತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕ್ರೈಸ್ತ ಜನರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಇಸಾಕ್ ಕೇಂಪೆನೋರ್, ಸುರೇಂದ್ರ ಕೋಟೆ, ಸಚಿನ್ ಚಂಪಾಕರ್, ಪವನ್, ಸಂದೀಪ್, ಸಂಪತಕುಮಾರ್, ಸಂತೋಷ್ ಹಾಗೂ ಸುರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.






