ಬೀದರ್ | ಕಳಪೆ ರಸ್ತೆ ಕಾಮಗಾರಿ ಆರೋಪ : ಲೋಕೋಪಯೋಗಿ ಇಲಾಖೆಯ ಇಂಜಿನಿಯರನ್ನು ವರ್ಗಾವಣೆ ಮಾಡಲು ಮನವಿ

ಬೀದರ್ : ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ್ ಕಾಮಶೆಟ್ಟಿ ಅವರು ಬೀದರ್ ತಾಲೂಕಿನಲ್ಲಿ ಡಾಂಬರೀಕರಣ ರಸ್ತೆಗಳನ್ನು ಸಂಪೂರ್ಣವಾಗಿ ಕಳಪೆ ಮಟ್ಟದಿಂದ ನಿರ್ಮಾಣ ಮಾಡಿದ್ದು, ಅವರನ್ನು ಬೀದರ್ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ಪ್ರಜಾ ಶಕ್ತಿ ಸಮಿತಿಯು ಒತ್ತಾಯಿಸಿದೆ.
ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ರಸ್ತೆಯು ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿದ್ದು, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಗುತ್ತಿಗೆದಾರರ ಮೇಲೆ ಯಾವುದೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಲಾಗಿದೆ.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಬೀದರ್ ನಗರದಲ್ಲಿ ರಸ್ತೆಗಳು ಹಾಳಾದರು ದುರಸ್ತಿ ಮಾಡಿಲ್ಲ. ಬೀದರ್ ತಾಲೂಕಿನ ಕೆಲ ಹಳ್ಳಿಗಳ ರಸ್ತೆಗಳು ಸಂಪೂರ್ಣವಾಗಿ ಕಳಪೆ ಮಟ್ಟದಿಂದ ನಿರ್ಮಾಣ ಮಾಡಿದ್ದಾರೆ. ಇದರ ಬಗ್ಗೆ ಹಲವು ಬಾರಿ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ್ ಕಾಮಶೆಟ್ಟಿ ಅವರಿಗೆ ದೂರು ನೀಡಿದರೂ, ಸಹ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಹಾಗೂ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಅವರಿಗೆ ಕುಮ್ಮಕು ನೀಡುತ್ತಿದ್ದಾರೆ. ಇದನ್ನು ನೋಡಿದರೆ ಇವರು ಕೂಡ ಆ ಕಳಪೆ ಕಾಮಗಾರಿಯಲ್ಲಿ ಭಾಗಿಯಾಗಿದ್ದು, ಕಂಡು ಬರುತ್ತಿದೆ ಎಂದು ದೂರಲಾಗಿದೆ.
ಇಂತಹ ಬೇಜವಾಬ್ದಾರಿ ಅಧಿಕಾರಿಯನ್ನು ಕೂಡಲೆ ಬೀದರ್ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ವರ್ಗಾವಣೆ ಮಾಡಬೇಕು. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೆ ಇದ್ದರೆ ಲೋಕೋಪಯೋಗಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ, ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿಯ ಜಿಲ್ಲಾಧ್ಯಕ್ಷ ಸಾಯಿ ಶಿಂಧೆ, ಜಿಲ್ಲಾ ಉಪಾಧ್ಯಕ್ಷ ಮಹೇಂದ್ರಕುಮಾರ್ ಹೊಸಮನಿ, ಜಿಲ್ಲಾ ಖಜಾಂಚಿ ರಾಜಕುಮಾರ್ ಹೊನ್ನಿಕೇರೆ, ಡಿವಿಪಿ ಯ ಜಿಲ್ಲಾ ಸಂಚಾಲಕ ಸಂದೀಪ್ ಕಾಂಟೆ, ಧನರಾಜ್ ಮೇತ್ರೆ, ಆಕಾಶ್ ತ್ರಿಮುಖೆ, ವಿನೋದ್ ಶಿಂಧೆ ಹಾಗೂ ರಾಜಕುಮಾರ್ ಜನವಾಡಾ ಇದ್ದರು.







