ಬೀದರ್ | ಕಳಪೆ ಸಾಮಗ್ರಿ ಬಳಸಿ ಶಾಲಾ ಕಟ್ಟಡ ನಿರ್ಮಾಣ ಆರೋಪ ; ಸೂಕ್ತ ಕ್ರಮ ಕೈಗೊಳ್ಳಲು ಮನವಿ

ಬೀದರ್ : ಭಾಲ್ಕಿ ತಾಲೂಕಿನ ಜೋಳದಾಬಕಾ ಗ್ರಾಮದಲ್ಲಿನ ಶಿಥಿಲಾವಸ್ಥೆಯಲ್ಲಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನೆಲಸಮಗೊಳಿಸಿ, ಹೊಸ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ಹೊಸ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಂಪೂರ್ಣವಾಗಿ ಕಳಪೆ ಮಟ್ಟದ ಸಾಮಗ್ರಿ ಉಪಯೋಗಿಸಲಾಗುತ್ತಿದೆ ಎಂದು ಭಾರತೀಯ ರಾಷ್ಟ್ರೀಯ ಭೀಮ್ ಆರ್ಮಿ ಸಂಘಟನೆ ಆರೋಪಿಸಿದೆ.
ಇಂದು ಭಾಲ್ಕಿಯ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕೆಕೆಆರ್‌ಡಿಬಿಯ ಅನುದಾನದಡಿಯಲ್ಲಿ 50 ಲಕ್ಷ ರೂ. ನಲ್ಲಿ ಹೊಸ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಹಳೆ ಶಾಲಾ ಕಟ್ಟಡದ ನೆಲಸಮಗೊಳಿಸಿದ ಕಲ್ಲುಗಳನ್ನೇ ಹೊಸದಾಗಿ ನಿರ್ಮಿಸುತ್ತಿರುವ ಶಾಲಾ ಕಟ್ಟಡದಲ್ಲಿ ಬಳಸಲಾಗುತ್ತಿದೆ. ಹಳೆ ಶಾಲಾ ಕಟ್ಟಡಲ್ಲಿದ್ದ ಕಬ್ಬಿಣದ ರಾಡುಗಳು ಜೆಇ ಮತ್ತು ಗುತ್ತಿಗೆದಾರರು ಸೇರಿ ಮಾರಾಟ ಮಾಡಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದಾರೆ ಎಂದು ದೂರಲಾಗಿದೆ.
ಜೆಇ ಮತ್ತು ಗುತ್ತಿಗೆದಾರರು ಸೇರಿಕೊಂಡು ಅಂದಾಜು ಪಟ್ಟಿಯಂತೆ ಶಾಲಾ ಕಟ್ಟಡ ನಿರ್ಮಾಣ ಮಾಡದೇ, ಕಳಪೆ ಸಾಮಗ್ರಿಗಳು ಬಳಸಿ, ಶಾಲಾ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಶಾಲಾ ಕಟ್ಟಡ ಕಾಮಗಾರಿಯನ್ನು ಖುದ್ದಾಗಿ ಪರಿಶೀಲಿಸಬೇಕು. ಜೆಇ ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಸಂಘಟನೆ ಮತ್ತು ಗ್ರಾಮಸ್ಥರು ಸೇರಿ ಕಚೇರಿ ಮುಂದೆ ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಭೀಮ್ ಆರ್ಮಿ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದೀಲಿಪಕುಮಾರ್ ವರ್ಮಾ, ತಾಲೂಕಾಧ್ಯಕ್ಷ ಗೌತಮ್ ಕೌಡೆ, ದಲಿತ ಮುಖಂಡರಾದ ಉತ್ತಮಕುಮಾರ್ ಕುಂದೆ, ಮಿಲಿಂದ್ ಲಾಂಬ್ಲೆ, ಸಿದ್ದು ಜಮಾದಾರ್, ಅಮರಕುಮಾರ್ ಕಟ್ಟಿಮನಿ, ಅಂಬಾದಾಸ್ ಕುಂದೆ ಹಾಗೂ ದರ್ಶನ್ ಕುಂಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.







