ಬೀದರ್ | ಪೊಲೀಸರಿಂದ ಕಿರುಕುಳ ಆರೋಪ: ಯೂಟ್ಯೂಬರ್ ಆತ್ಮಹತ್ಯೆಗೆ ಯತ್ನ

ಬೀದರ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಯೂಟ್ಯೂಬರ್ ಒಬ್ಬರು ಫೇಸ್‌ಬುಕ್ ಲೈವ್‌ನಲ್ಲೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ.
‘ಮೀಡಿಯಾ ಇನ್ ಟ್ರುತ್’ ಎಂಬ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಸಲ್ಮಾನ್ ಖಾನ್ ಆತ್ಮಹತ್ಯೆಗೆ ಯತ್ನಿಸಿದ ಯೂಟ್ಯೂಬರ್.
ಕೆಲ ದಿನಗಳಿಂದ ಎಸ್ಪಿ ಸೇರಿದಂತೆ ಕೆಲ ಪೊಲೀಸರಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ. ನಾನು ಎಲ್ಲ ರೀತಿಯ ವಿಡಿಯೋಗಳನ್ನು ನನ್ನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್ಲೋಡ್ ಮಾಡುತ್ತೇನೆ. ಅವನ್ನೆಲ್ಲ ಎಸ್ಪಿ ಅವರಿಗೆ ಸಹ ಹಂಚಿಕೊಳ್ಳುತ್ತೇನೆ. ಆದರೆ, ಎಸ್ಪಿ ಕಚೇರಿಯಲ್ಲಿ ಶಾಂತಿ ಸಭೆ ಇದೆ ಎಂದು ಕರೆಸಿ, ಎಲ್ಲರ ಎದುರು ಹಲ್ಲೆಗೆ ಯತ್ನಿಸಿ, ಸಂಪೂರ್ಣವಾಗಿ ನನ್ನ ಮಾನ-ಮರ್ಯಾದೆಯನ್ನು ಹಾಳು ಮಾಡಿದ್ದಾರೆ ಎಂದು ಸಲ್ಮಾನ್ ಖಾನ್ ಫೇಸ್‌ಬುಕ್ ಲೈವ್‌ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
“ಪೊಲೀಸ್ ಇಲಾಖೆಯ ವಿಡಿಯೋಗಳನ್ನು ಯಾಕೆ ಹಾಕುತ್ತಿದ್ದೀಯಾ?” ಎಂದು ನನಗೆ ಪ್ರಶ್ನಿಸಲಾಗುತ್ತಿದೆ. ಕರೆ ಮಾಡಿ ವಿಡಿಯೋ ಡಿಲೀಟ್ ಮಾಡಲು ಹೇಳಲಾಗುತ್ತಿದೆ. ಎಸ್ಪಿ ಅವರು ನನಗೆ ತುಂಬಾ ತೊಂದರೆ ನೀಡುತ್ತಿದ್ದಾರೆ. ಮೀಡಿಯಾದವರನ್ನೇ ಇಷ್ಟೊಂದು ಕಿರುಕುಳ ನೀಡುತ್ತಿರುವ ಎಸ್ಪಿ, ಸಾಮಾನ್ಯ ಜನರಿಗೆ ಎಷ್ಟು ತೊಂದರೆ ನೀಡುತ್ತಿರಬಹುದು ಎಂದು ಅವರು ಪ್ರಶ್ನಿಸಿದ್ದಾರೆ.
ಎಸ್ಪಿ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಸತ್ಯದ ಕುತ್ತಿಗೆ ಹಿಸುಕಿದ್ದಾರೆ. ಜಿಲ್ಲೆಯಲ್ಲಿ ಬಹುತೇಕರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಯೂಟ್ಯೂಬ್ ಚಾನಲ್ ಬಂದ್ ಮಾಡಲು ನನ್ನನ್ನು ಒತ್ತಾಯಿಸಲಾಗುತ್ತಿದೆ. ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲು ಪ್ರಯತ್ನ ಮಾಡಲಾಗುತ್ತಿದೆ. ಎಸ್ಪಿ ಅವರು ನನ್ನ ಎನ್‌ಕೌಂಟರ್ ಮಾಡುವುದಾಗಿ ಹೇಳಿದ್ದಾರೆ ಎಂದು ಸಲ್ಮಾನ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಈ ವಿಡಿಯೋ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ವರೆಗೆ ತಲುಪಬೇಕು ಎಂದಿದ್ದಾರೆ.
ಎಸ್ಪಿ ಅವರು ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ನನ್ನ ಜೀವ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ನಾನು ಜಿಲ್ಲೆಯ ಸಾರ್ವಜನಿಕರಲ್ಲಿ ವಿನಂತಿ ಮಾಡುವುದು ಏನೆಂದರೆ, ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಮನನೊಂದು ಅಳುತ್ತಾ ಮಾತ್ರೆಗಳನ್ನು ಸೇವಿಸಿದ್ದಾರೆ.
ಗುರುವಾರ ರಾತ್ರಿ ಸಲ್ಮಾನ್ ಖಾನ್ ಅವರ ಆರೋಗ್ಯ ಗಂಭೀರವಾಗಿತ್ತು. ಸದ್ಯ ಅವರು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.






