Bidar | ಎ.29ರಂದು ಮರಾಠಾ ಸಮುದಾಯದಿಂದ ಅಂಬೇಡ್ಕರ್ ಜಯಂತಿ ಆಚರಣೆ : ದಾದಾ ಮಹಾರಾಜ್ ನಗರಕರ್

ಬೀದರ್: ಎ29ರಂದು ಸಂಜೆ 5 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಮರಾಠಾ ಸಮುದಾಯದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾದಾ ಮಹಾರಾಜ್ ನಗರಕರ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಸಮುದಾಯಗಳ ನಡುವೆ ಉಂಟಾಗಿರುವ ಭಿನ್ನತೆಗಳನ್ನು ದೂರ ಮಾಡಿ, ಒಗ್ಗಟ್ಟು ಮತ್ತು ಸಹೋದರತೆ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಶಿವಾಜಿ ಮಹಾರಾಜ ಹಾಗೂ ಡಾ. ಅಂಬೇಡ್ಕರ್ ಸೇರಿದಂತೆ ಮಹಾಪುರುಷರ ವಿಚಾರಗಳಿಂದ ಪ್ರೇರಣೆ ಪಡೆಯಬೇಕು. ಪ್ರೀತಿ ಮತ್ತು ಸಹಬಾಳ್ವೆಯ ಮೂಲಕ ಸಮಾಜದಲ್ಲಿ ಏಕತೆ ನಿರ್ಮಾಣವಾಗಬೇಕು ಎನ್ನುವುದೇ ಜಯಂತಿ ಆಚರಣೆಯ ಮೂಲ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. ಈ ವರ್ಷದಿಂದ ಆರಂಭವಾಗುತ್ತಿರುವ ಈ ಕಾರ್ಯಕ್ರಮ ಮುಂದಿನ ವರ್ಷಗಳಲ್ಲೂ ನಿರಂತರವಾಗಿ ನಡೆಯಲಿದೆ ಎಂದರು.
ಕಾರ್ಯಕ್ರಮಕ್ಕೆ ವಿವಿಧ ಸಮುದಾಯಗಳ ಸಂತರ ಸಾನಿಧ್ಯವಿದ್ದು, ಕಾರ್ಮಿಕ ಸಚಿವ ಸಂತೋಷ್ ಲಾಡ್ ಭಾಗವಹಿಸಲಿದ್ದಾರೆ. ಎಲ್ಲ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಕರೆ ನೀಡಿದರು.
ಭಂತೆ ಸಂಘರಖ್ಖಿತ್ ಮಾತನಾಡಿ, ಡಾ. ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತರಲ್ಲ. ಅವರು ರಚಿಸಿದ ಸಂವಿಧಾನವು ಸರ್ವರಿಗೂ ಸಮಾನ ಹಕ್ಕುಗಳನ್ನು ನೀಡುತ್ತದೆ. ಆದ್ದರಿಂದ ಅವರ ಜಯಂತಿಯನ್ನು ಎಲ್ಲರೂ ಆಚರಿಸಬೇಕು ಎಂದು ಹೇಳಿದರು.
ಸಕಲ ಮರಾಠಾ ಸಂಘಟನೆಗಳಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿರುವುದು ಸಂತೋಷದ ವಿಷಯವಾಗಿದ್ದು, ಇದು ನಿಜವಾದ ಸಾಮಾಜಿಕ ಪರಿವರ್ತನೆಯ ಸಂಕೇತವಾಗಿದೆ. ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾತೀಯತೆ ಮತ್ತು ಭೇದಭಾವ ಇರುವುದರಿಂದ, ಅಂಬೇಡ್ಕರ್ ಅವರ ವಿಚಾರಗಳನ್ನು ಜನರಿಗೆ ತಲುಪಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಲೀಡ್ಕರ್ ಸಮಿತಿಯ ಅಧ್ಯಕ್ಷ ನಾಗರಾಜ್ ಮುಂಡರಗಿ, ನಾರಾಯಣ ಗಣೇಶ್, ಬಾಬುರಾವ್ ಪಾಸ್ವಾನ್, ಧನರಾಜ್, ಕಾಶೀನಾಥ್ ಚಲ್ವಾ, ತಾನಾಜಿ ಸಗರ್ ಹಾಗೂ ಮಹೇಶ್ ಗೋರನಾಳಕರ್ ಸೇರಿದಂತೆ ಇತರರು ಇದ್ದರು.






