Bidar | ಜೂ. 13ರಂದು ಎಸ್ಐಆರ್ ವಿರೋಧಿ ಜನಜಾಗೃತಿ ಜಾಥಾಗೆ ಚಾಲನೆ: ಓಂಪ್ರಕಾಶ್ ರೊಟ್ಟೆ

ಓಂಪ್ರಕಾಶ್ ರೊಟ್ಟೆ
ಬೀದರ್ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ರಾಜ್ಯಾದ್ಯಂತ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಎಸ್ಐಆರ್ ವಿರೋಧಿ ಕರ್ನಾಟಕ ವೇದಿಕೆಯ ನೇತೃತ್ವದಲ್ಲಿ ಜೂ.20ರಂದು ಬೆಂಗಳೂರಿನ ಫ್ರೀಡ್ಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಜೂ.13 ರಂದು ಬೆಳಗ್ಗೆ 10:30 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜನ ಜಾಗೃತಿ ಜಾಥಾ ವಾಹನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಎದ್ದೇಳು ಕರ್ನಾಟಕ ಜಿಲ್ಲಾ ಸಂಯೋಜಕ ಓಂಪ್ರಕಾಶ್ ರೊಟ್ಟೆ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜನಜಾಗೃತಿ ಜಾಥಾ ವಾಹನಕ್ಕೆ ಚಾಲನೆ ನೀಡಲಾಗುತ್ತದೆ. ಜಾಥಾವು ಬಸವೇಶ್ವರ್ ವೃತ್ತ, ಭಗತ್ ಸಿಂಗ್ ವೃತ್ತ, ಶಿವಶರಣ ಹರಳಯ್ಯ ವೃತ್ತ ಹಾಗೂ ವೀರ ಗಣಾಚಾರಿ ಮಡಿವಾಳ ಮಾಚಿದೇವರ ವೃತ್ತಗಳ ಮೂಲಕ ಸಂಚರಿಸಿ, ನೌಬಾದ್ ಪ್ರಥಮ ದರ್ಜೆ ಕಾಲೇಜು ಹಾಗೂ ಚನ್ನಬಸವೇಶ್ವರ್ ಗುರುಕುಲದ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳುವ ಕುರಿತು ಜನಜಾಗೃತಿ ಮೂಡಿಸಲಿದೆ. ಬಳಿಕ ಜಾಥಾ ಬಸವಕಲ್ಯಾಣದತ್ತ ತೆರಳಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಗತಿಪರ ಸಂಘಟನೆಗಳು, ಜಾತ್ಯತೀತ ರಾಜಕೀಯ ಪಕ್ಷಗಳು, ಸಾಹಿತಿಗಳು, ಚಿಂತಕರು, ಕಲಾವಿದರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಒಕ್ಕೂಟವಾದ 'ಎಸ್ಐಆರ್ ವಿರೋಧಿ ಕರ್ನಾಟಕ' ವೇದಿಕೆ ಈ ಹೋರಾಟವನ್ನು ಸಂಘಟಿಸುತ್ತಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ಅಸಂವಿಧಾನಿಕ, ಅವೈಜ್ಞಾನಿಕ, ದೋಷಪೂರಿತ ಹಾಗೂ ದುರುದ್ದೇಶಪೂರಿತವಾಗಿದ್ದು, ಸಮಾಜದ ದುರ್ಬಲ ವರ್ಗಗಳು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ಮತದಾನದ ಹಕ್ಕಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯಾದ್ಯಂತ ಎದ್ದೇಳು ಕರ್ನಾಟಕ ಅಭಿಯಾನದಡಿ ಐದು ಮಾರ್ಗಗಳಲ್ಲಿ ಜನಜಾಗೃತಿ ಜಾಥಾ ನಡೆಯಲಿದ್ದು, ಬೆಂಗಳೂರಿನಲ್ಲಿ ನಮ್ಮ ಮತ ನಮ್ಮ ಹಕ್ಕು ವೇದಿಕೆ ಪ್ರಚಾರಾಂದೋಲನದ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಜಾಥಾಗೆ ಸಾರ್ವಜನಿಕರು, ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ನೀಡುವಂತೆ ಅವರು ಕರೆ ನೀಡಿದ್ದಾರೆ.
ಜೂ. 20ರಂದು ಬೆಂಗಳೂರಿನ ಫ್ರೀಡ್ಂ ಪಾರ್ಕ್ ನಲ್ಲಿ ನಡೆಯಲಿರುವ ಬೃಹತ್ ಪ್ರತಿರೋಧ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿ ಚುನಾವಣಾ ಆಯೋಗಕ್ಕೆ ತಮ್ಮ ವಿರೋಧದ ಸಂದೇಶ ರವಾನಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜನತಾಂತ್ರಿಕ ಹಕ್ಕುಗಳ ರಕ್ಷಣೆಗೆ ಬೆಂಬಲ ನೀಡುವಂತೆ ಅವರು ಮನವಿ ಮಾಡಿದ್ದಾರೆ.






