ಬೀದರ್ | ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ

ಬೀದರ್ : ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ)ದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಇಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಜಿಲ್ಲೆಯಲ್ಲಿ ಯಾವುದೇ ದೊಡ್ಡ ಕಾರ್ಖಾನೆಗಳಿಲ್ಲದೆ ಕೃಷಿಯೇ ಪ್ರಮುಖ ವೃತ್ತಿಯಾಗಿದ್ದು, ತಾಂತ್ರಿಕ ಯಂತ್ರೋಪಕರಣಗಳ ಬಳಕೆಯಿಂದಾಗಿ ಹಳ್ಳಿಗಳ ಕಾರ್ಮಿಕರು ಪಟ್ಟಣಗಳಿಗೆ ವಲಸೆ ಬಂದು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ನಿಜವಾದ ಕಾರ್ಮಿಕರು ಕಲ್ಯಾಣ ಮಂಡಳಿಯೊಡನೆ ನೋಂದಣಿಯಾಗದೇ ಉಳಿದಿದ್ದು, ಕೆಲವರು ಮಾತ್ರ ಆನ್‌ಲೈನ್ ಮೂಲಕ ಸೌಲಭ್ಯ ಪಡೆದಿದ್ದಾರೆ. ಕಾರ್ಮಿಕ ಇಲಾಖೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಮಂಜೂರಾದರು ಕೂಡ ಇನ್ನೂ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಬೀದರ್ ಜಿಲ್ಲೆಯಲ್ಲಿ ಸ್ವಂತ ಕಾರ್ಮಿಕರ ಕಚೇರಿ ನಿರ್ಮಿಸಬೇಕು. ಕಾರ್ಮಿಕರು ಸೇರುವ ಸ್ಥಳಗಳಲ್ಲಿ ಇಂದಿರಾ ಕ್ಯಾಂಟೀನ್ ಮತ್ತು ಶೌಚಾಲಯ ವ್ಯವಸ್ಥೆ ಮಾಡಬೇಕು. ಹೊಸ ನೋಂದಣಿ ಮತ್ತು ನವೀಕರಣ ಅರ್ಜಿಗಳನ್ನು ಕಾರ್ಮಿಕ ಕಚೇರಿಯಲ್ಲೇ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಅತಿವೃಷ್ಟಿಯಿಂದ ಕೆಲಸವಿಲ್ಲದ ಕಾರ್ಮಿಕರಿಗೆ ಪರಿಹಾರ ಧನ ಘೋಷಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಂ.ಡಿ ಶಫಾಯತ್ ಅಲಿ, ತಾಲೂಕು ಕಾರ್ಯದರ್ಶಿ ಪ್ರಭು ತಗಣಿಕರ್ ಬಗದಲ್ ಹಾಗೂ ಸದಸ್ಯೆ ಜೈಶೀಲ್ ಅವರು ಉಪಸ್ಥಿತರಿದ್ದರು.







