ಬೀದರ್| ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳೆ ಸಮೀಕ್ಷೆದಾರರಿಂದ ಶಾಸಕರಿಗೆ ಮನವಿ

ಬೀದರ್ : ಕರ್ನಾಟಕ ರಾಜ್ಯದ ಬೆಳೆ ಸಮೀಕ್ಷೆದಾರರಿಗೆ (ಪಿ.ಆರ್) ಸೇವಾ ಭದ್ರತೆ ಜೀವವಿಮೆ ನೀಡಬೇಕು. ನಮ್ಮನ್ನು ಖಾಯಂಗೊಳಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪಿಆರ್ ಸಮೀಕ್ಷೆದಾರರಿಂದ ಬಸವಕಲ್ಯಾಣ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದ ಬೆಳೆ ಸಮೀಕ್ಷೆದಾರರು ಸುಮಾರು 7 ರಿಂದ 8 ವರ್ಷಗಳಿಂದ ಪ್ರತಿವರ್ಷ ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ನಿಗದಿತ ಸಮಯದಲ್ಲಿ ಅನೇಕ ಸಮಸ್ಯೆಗಳ ನಡುವೆ ಬೆಳೆ ಸಮೀಕ್ಷೆ ಮಾಡುತ್ತಿದ್ದಾರೆ. ಆದರೆ ನಮಗೆ ಯಾವುದೇ ರೀತಿಯಲ್ಲಿ ರಕ್ಷಣೆ ಇಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.
ರೈತರು ಪಹಣಿ ಪತ್ರದಲ್ಲಿ ಬೆಳೆ ನಮೂದು ಮಾಡಲು, ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯ ಲಾಭ ಪಡೆಯಲು, ಬೆಳೆ ವಿಮೆ ಪಡೆಯಲು, ಬೆಳೆ ಹಾನಿ ಪರಿಹಾರ ಪಡೆಯಲು, ಸರ್ಕಾರದ ಮಾರುಕಟ್ಟೆಯಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಮೀಕ್ಷೆ ಅತ್ಯಗತ್ಯವಾಗಿದೆ. ರೈತರು ದೇಶದ ಬೆನ್ನೆಲುಬಾಗಿದ್ದಾರೆ. ಆದರೆ ನಾವು ರೈತರ ಬೆನ್ನಲುಬಾಗಿದ್ದೇವೆ. ನಾವು ನಮ್ಮ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಸಮೀಕ್ಷೆ ಮಾಡುತ್ತೇವೆ. ಕಲ್ಲು, ಮುಳ್ಳುಗಳೆನ್ನದೆ ಹೋಗುತ್ತೇವೆ. ಬೆಳೆದ ಬೆಳೆಗಳಲ್ಲಿ ಅಡಗಿ ಕುಳಿತಿರುವ ಹಾವುಗಳ, ಕೆಸರಿನಲ್ಲಿ ಸಿಕ್ಕಿ ಬೀಳುವ, ಕಾಡುಪ್ರಾಣಿಗಳ ದಾಳಿಯ ಹೆದರಿಕೆಯಲ್ಲಿ ಕೆಲಸ ಮಾಡುತ್ತೇವೆ. ಆದರೆ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳಲಾಗಿದೆ.
ಕೆಲವು ರೈತರು ಅವಾಚ್ಯ ಪದಗಳಿಂದ ನಿಂದಿಸಿದರೂ ಕೂಡ ತಾಳ್ಮೆಯಿಂದ ಸಮೀಕ್ಷೆ ಮಾಡುತ್ತೇವೆ. ಆದರೆ ಯಾವ ಅಧಿಕಾರಿಗಳಾಗಲಿ, ಸರ್ಕಾರವಾಗಲಿ ನಮ್ಮ ಮೇಲೆ ಕರುಣೆ ತೋರದೆ ಮಲತಾಯಿ ಧೋರಣೆ ತೋರುತ್ತಿದೆ. ಆದರೆ ನಾವು ಸಹನೆಯಿಂದಿದ್ದೇವೆ. ಆದ್ದರಿಂದ ಸರಕಾರ ನಮ್ಮ ಕೂಗನ್ನು ಕೇಳಿ, ಪರಿಶೀಲಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮೋಹನ್ ಮಾನೆ, ಭಾಲ್ಕಿ ತಾಲೂಕು ಅಧ್ಯಕ್ಷ ಏಕನಾಥ ಮೇತ್ರೆ, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಕಾಂಬ್ಳೆ, ಹುಲಸೂರು ತಾಲೂಕು ಅಧ್ಯಕ್ಷ ಪರಮೇಶ್ವರ್ ಬಿರಾದಾರ್, ಬಸವಕಲ್ಯಾಣ ತಾಲೂಕು ಅಧ್ಯಕ್ಷ ಶಂಕರಲಿಂಗ, ಜಿಲ್ಲಾ ಖಜಾಂಚಿ ಮಹೇಶ್ ಗೊರಟೆ, ದಿಲೀಪ್ ಗೋರ್ಟಾ, ಬಸವರಾಜ್ ಎಳ್ಳುರೆ, ವಿಕಾಸ್ ಉಪಸ್ಥಿತರಿದ್ದರು.







