ಬೀದರ್ | 10 ಸಾವಿರ ಮನೆಗಳ ಮಂಜೂರಾತಿಗೆ ಕನ್ನಡಿಗರ ರಕ್ಷಣಾ ವೇದಿಕೆಯಿಂದ ಮನವಿ

ಬೀದರ್: ಮಹಾನಗರ ಪಾಲಿಕೆಯಾದ ಬೀದರ್ ನಗರದಲ್ಲಿ ಬಡ ಜನರಿಗಾಗಿ 10 ಸಾವಿರ ಮನೆಗಳನ್ನು ಮಂಜೂರು ಮಾಡಬೇಕು ಎಂದು ಕನ್ನಡಿಗರ ರಕ್ಷಣಾ ವೇದಿಕೆಯ ವತಿಯಿಂದ ಸಂಸದ ಸಾಗರ್ ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಗರದ ಶಿವನಗರ, ಗುಂಪಾ, ಬ್ಯಾಂಕ್ ಕಾಲೋನಿ ಹೊರತುಪಡಿಸಿ, ಉಳಿದ ಮೂವತ್ತು ವಾರ್ಡ್‌ಗಳಲ್ಲಿ ಬಡ ಕುಟುಂಬಗಳು ವಾಸವಾಗಿದ್ದು, ದಿನನಿತ್ಯ ಕೂಲಿ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. 2025–26ನೇ ಸಾಲಿನ ಪ್ರಧಾನ ಮಂತ್ರಿ ನಗರ ಅವಾಸ್ ಯೋಜನೆ ಅಡಿಯಲ್ಲಿ ಸ್ವಂತ ಮನೆ ಪಡೆಯಲು ಫಲಾನುಭವಿಗಳು ಬಿಎಲ್‌ಸಿ ನೇತೃತ್ವದ ನಿರ್ಮಾಣ ಮತ್ತು ಎಎಚ್‌ಪಿ ಪಾಲುದಾರಿಕೆ ಯೋಜನೆಗಳಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
2018–19ರಲ್ಲಿ ಮಂಜೂರಾದ ಮನೆಗಳಿಗೆ ಮೂರು ಕಂತಿನ ಹಣ ಮಾತ್ರ ಬಿಡುಗಡೆಯಾಗಿದ್ದು, ಉಳಿದ ಕಂತು ಇನ್ನೂ ಲಭ್ಯವಾಗಿಲ್ಲ. ಇದರಿಂದ ಫಲಾನುಭವಿಗಳು ಸಾಲ ಪಡೆದು ಮನೆಗಳನ್ನು ನಿರ್ಮಿಸಿದ್ದಾರೆ. ಬಾಕಿ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ರಾಜೀವಗಾಂಧಿ ವಸತಿ ನಿಗಮ ಕೇಂದ್ರ ಸರ್ಕಾರಕ್ಕೆ ಒತ್ತಡ ತರಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬೀದರ್ ನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಭೂಮಿ ಹೊಂದಿರುವವರಿಗೆ 3,000–3,500 ಮನೆಗಳು ಹಾಗೂ ಭೂಮಿ ಇಲ್ಲದ ಬಡ ಕುಟುಂಬಗಳಿಗೆ 3,500–4,000 ಮನೆಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕ್ರಮ ಕೈಗೊಳ್ಳಬೇಕೆಂದು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡಿಗರ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀಕಾಂತ್ ಭವಾನಿ, ಸಾಂಸ್ಕೃತಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ಡಿ.ಎಸ್., ಜಿಲ್ಲಾ ಉಪಾಧ್ಯಕ್ಷ ಆನಂದ್ ಪಾಟೀಲ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಡಿ. ಸಿದ್ದಿಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಾಗ್ಯನೋರ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸ್ಟಾಲಿನ್, ಸಹ ಕಾರ್ಯದರ್ಶಿ ವಿಜಕುಮಾರ್ ಮೋರ್ಗಿಕರ್, ಮಾಣಿಕ್ ಮೇತ್ರೆ, ಸಂಜುಕುಮಾರ್ ತಡಪಳ್ಳಿ, ಅಭಿಷೇಕ್, ವಿನೋದ್ ಹೊಸಮನಿ, ಸುಜೀತಕುಮಾರ್ ಕೋಟೆ, ಅರಣಕುಮಾರ್ ಹಾಗೂ ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಡಾ. ಸುಬ್ಬಣ್ಣ ಕರಕನಳ್ಳಿ ಉಪಸ್ಥಿತರಿದ್ದರು.







