ಬೀದರ್ | ಸಿಂದೋಲ್ ಗ್ರಾಮದಿಂದ ಯಾಕತಪೂರ್ ಗ್ರಾಮದವರೆಗೆ ರಸ್ತೆ ನಿರ್ಮಿಸಲು ಮನವಿ

ಬೀದರ್ : ಸಿಂದೋಲ್ ಗ್ರಾಮದಿಂದ ತಡಪಳ್ಳಿ (ವಾಯಾ) ಯಾಕತಪೂರ್ ಗ್ರಾಮದವರೆಗೆ ಒಟ್ಟು 9 ಕಿ.ಮೀ. ರಸ್ತೆ ಹಾಳಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಈ ರಸ್ತೆಯು ಕೂಡಲೇ ಡಾಂಬರೀಕರಣ ಮಾಡಬೇಕು ಎಂದು ಭಾರತೀಯ ರಾಷ್ಟ್ರೀಯ ಭೀಮ ಆರ್ಮಿ ಸಮಿತಿಯು ಮನವಿ ಸಲ್ಲಿಸಿದೆ.
ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಸಿಂದೋಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತಡಪಳ್ಳಿ, ಪಾತರಪಳ್ಳಿ, ಶೇಕಾಪೂರ್ ಹಾಗೂ ಸಿಂದೋಲ್ ತಾಂಡಾದ ಸಾರ್ವಜನಿಕರು ಪ್ರತಿದಿನ ಸಿಂದೋಲ್ ಗ್ರಾಮಕ್ಕೆ ಸಂಚರಿಸುತ್ತಾರೆ. ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಾರೆ. ಸಿಂದೋಲ್ ಮಾರ್ಗವಾಗಿ ಭಂಗೂರ ಹಾಗೂ ಎನ್.ಎಚ್-65 ಹೆದ್ದಾರಿ ಮೂಲಕ ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸುತ್ತಾರೆ. ಆದರೆ ಸುಮಾರು 15 ವರ್ಷಗಳಿಂದ ಈ ರಸ್ತೆ ಕೆಟ್ಟು ಹೋಗಿದ್ದು, ಯಾರೊಬ್ಬ ಜನಪ್ರತಿನಿಧಿಗಳು ಗಮನ ಹರಿಸಲಿಲ್ಲ ಎಂದು ದೂರಲಾಗಿದೆ.
ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ರೈತರು, ದ್ವಿಚಕ್ರವಾಹನದ ಮೇಲೆ ಸಂಚರಿಸುವಾಗ ಬಿದ್ದು ಗಾಯಗಳಾಗಿ ಆಸ್ಪತ್ರೆಗೆ ದಾಖಲಾದ ಅನೇಕ ಉದಾಹರಣೆಗಳಿವೆ. ಸಿಂದೋಲ್ ಗ್ರಾಮದಿಂದ ಯಾಕತಪೂರ್ ಗ್ರಾಮದವರೆಗೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧಶ್ಯಕ್ಷ ದೀಲಿಪಕುಮಾರ್ ವರ್ಮಾ, ರಾಜ್ಯ ಉಪಾಧ್ಯಕ್ಷ ಅಶೋಕ್ ಭಾವಿದೊಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಾವಿದೊಡ್ಡಿ, ಜಿಲ್ಲಾಧ್ಯಕ್ಷ ರಾಹುಲ್ ಭಂಗೂರೆ,ಜಿಲ್ಲಾ ಉಪಾಧ್ಯಕ್ಷ ಅವೀನಾಶ್ ಭಾಲ್ಕೆ, ಭೀಮರಾವ್ ಖಂದಾರೆ, ಗೌತಮ್ ಕೌಡೆ, ಭಗತ್ ಸಿಂಧೆ, ಜಾವೀದ್ ಮಿಯಾ, ಜಗನ್ನಾಥ್ ಹೊನ್ನಾ, ರಾಜಕುಮಾರ್ ಪ್ರಸಾದೆ, ಶಿವಾಜಿ ಗಾಯಕವಾಡ ಹಾಗೂ ಅಂಬ್ರೆಷ್ ಕೋಸಮ್ ಇದ್ದರು.







