Bidar | ಮೈಸಲಗಾ ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮನವಿ

ಬೀದರ್: ಬಸವಕಲ್ಯಾಣ ತಾಲೂಕಿನ ಮೈಸಲಗಾ ತಾಂಡಾದಲ್ಲಿ ಕಳೆದ ಸುಮಾರು 15 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ತಕ್ಷಣ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಕುರಿತು ಬಸವಕಲ್ಯಾಣ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಗಿದೆ.
ಬಸವಕಲ್ಯಾಣ ತಾಲೂಕಿನ ಏಕಲೂರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಮೈಸಲಗಾ ತಾಂಡಾದಲ್ಲಿ ಕೊಳವೆಬಾವಿಗಳ ಮೋಟಾರ್ಗಳು ದುರಸ್ತಿಗೆ ಬಂದಿರುವುದರಿಂದ ಸುಮಾರು 15 ದಿನಗಳಿಂದ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಇದರಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಮಸ್ಯೆ ಪರಿಹರಿಸುವಂತೆ ಏಕಲೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದರೂ, ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಆದ್ದರಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕೊಳವೆಬಾವಿಗಳ ಮೋಟಾರ್ಗಳ ದುರಸ್ತಿ ಕಾಮಗಾರಿ ಕೈಗೊಂಡು, ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕೆಡಿಪಿ ಸದಸ್ಯ ಪಿಂಟು ಕಾಂಬಳೆ, ಗುರುನಾಥ್, ವೆಂಕಟ್, ಸುನಿಲ್ ಜಾಧವ್, ಬಳಿರಾಮ್, ಹೀರಾ, ಸುರೇಶ, ಶಾಲುಬಾಯಿ, ಸಂಗೀತಾ, ಸೀತಾಬಾಯಿ, ಲಲಿತಾ, ಗುನಾಬಾಯಿ, ಶಂಕರ್, ಸುಂದರಬಾಯಿ ಹಾಗೂ ಎಶೋಧಾ ಸೇರಿದಂತೆ ಇತರ ಗ್ರಾಮಸ್ಥರು ಉಪಸ್ಥಿತರಿದ್ದರು.






