Bidar | ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಹಾವಳಿ ತಡೆಗೆ ಮನವಿ

ಬೀದರ್ : ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅನಧಿಕೃತ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಯಿಂದ ಮನವಿ ಸಲ್ಲಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಸಲ್ಲಿಸಿದ ಮನವಿ ಪತ್ರದಲ್ಲಿ, ಅನಧಿಕೃತ ಕೋಚಿಂಗ್ ಸೆಂಟರ್‌ಗಳು ದಿನದ 24 ಗಂಟೆಗಳ ಕಾಲ ವಸತಿ ಸೌಲಭ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಶಾಲಾ ಮಕ್ಕಳ ದೈನಂದಿನ ಕಲಿಕೆಗೆ ತಡೆಯುಂಟಾಗುತ್ತಿದ್ದು, ಜಿಲ್ಲಾದ್ಯಂತ ಇರುವ ವಿವಿಧ ಶಾಲಾ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಈ ಸಮಸ್ಯೆಯ ಕುರಿತು 2024ನೇ ವರ್ಷದಲ್ಲಿ ಇದಕ್ಕೆ ಸಂಬಂಧಪಟ್ಟ ಇಲಾಖೆಗೆ ಮೂರು ಬಾರಿ ದೂರು ನೀಡಲಾಗಿತ್ತು. ಆದರೆ, ಈವರೆಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಅನಧಿಕೃತ ಕೋಚಿಂಗ್ ಸೆಂಟರ್‌ಗಳು ಮಾತ್ರವಲ್ಲದೆ, ಅನುಮತಿ ಪಡೆದು ನಡೆಯುತ್ತಿರುವ ಕೋಚಿಂಗ್ ಸೆಂಟರ್‌ಗಳಿಗೂ ಈ ನಿಯಮಗಳು ಅನ್ವಯವಾಗುತ್ತವೆ. ಆದರೂ, ಯಾವುದೇ ಕ್ರಮ ಜರುಗಿಸದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅನಧಿಕೃತ ಕೋಚಿಂಗ್ ಸೆಂಟರ್‌ಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಇಂತಹ ಕೇಂದ್ರಗಳನ್ನು ತಕ್ಷಣವೇ ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ್ ಮಣಗೆರೆ, ಜಿಲ್ಲಾ ಖಜಾಂಚಿ ಗಣಪತಿ ಸೋಲಾಪುರೆ, ಬೀದರ್ ತಾಲೂಕಾಧ್ಯಕ್ಷ ಸಂದೀಪ್ ಶಟಕಾರ್, ಕಾರ್ಯದರ್ಶಿ ವಿಜಯಕುಮಾರ್ ಸಿಂಗ್, ಹುಮನಾಬಾದ್ ತಾಲೂಕಾಧ್ಯಕ್ಷ ಸುರೇಂದ್ರ ಹುಡಗಿಕರ್, ಭಾಲ್ಕಿ ತಾಲೂಕಾಧ್ಯಕ್ಷ ಸುಭಾಷ್ ಹೂಲಸುರೆ, ಔರಾದ್ ತಾಲೂಕಾಧ್ಯಕ್ಷ ಗುರುನಾಥ್ ದೇಶಮುಖ ಹಾಗೂ ಗುಂಡಯ್ಯ ತೀರ್ಥಾ ಸೇರಿದಂತೆ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.






