ಬೀದರ್ | ರೋಗಿಗಳಿಂದ ಹಣ ವಸೂಲಿ ಮಾಡುತ್ತಿರುವ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮನವಿ

ಬೀದರ್ : ಸರಕಾರವು ಬಡವರ ಆರೋಗ್ಯಕ್ಕಾಗಿ ಸಾಕಷ್ಟು ಅನುದಾನ ಮೀಸಲಿಟ್ಟು, ವಿವಿಧ ಯೋಜನೆಗಳು ಜಾರಿಗೊಳಿಸಿ, ಬಡವರಿಗೆ ಅನುಕೂಲ ಮಾಡಲು ಯತ್ನಿಸುತ್ತಿದ್ದರೆ, ಮತ್ತೊಂದು ಕಡೆ ಬಡವರಿಂದ ಹಣ ವಸೂಲಿ ಮಾಡಿ ಸುಲಿಗೆಗಿಳಿದ ಆಸ್ಪತ್ರೆಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬಡವರಿಗೆ ಆರ್ಥಿಕ ಸಮಸ್ಯೆ ಆಗಬಾರದೆಂಬ ಉದ್ದೇಶದಿಂದ 'ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ' ಎಂಬ ಯೋಜನೆ ಜಾರಿಗೆ ತಂದರೂ, ಕೂಡ ಆಸ್ಪತ್ರೆಯವರು ರೋಗಿಗಳಿಂದ ಹಣ ಸುಲಿಗೆ ಮಾಡುವುದು ಬಿಟ್ಟಿಲ್ಲ. ಸೆ.6ರಂದು ಔರಾದ್ ತಾಲೂಕಿನ ಬಸೀರಖಾನ್ ಎನ್ನುವರು ಆರೋಗ್ಯದ ಸಮಸ್ಯೆಯಿಂದ ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ತಪಾಸಣೆಗಾಗಿ ಬಂದಿದ್ದಾರೆ. ಮೂರು ದಿವಸ ಆ ರೋಗಿಯನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡು 40 ಸಾವಿರ ರೂ. ಕಟ್ಟಿದರೆ ಮಾತ್ರ ಚಿಕಿತ್ಸೆ ನೀಡುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ರೋಗಿಯು ಬಿಪಿಎಲ್ ಕಾರ್ಡ್ ತೋರಿಸಿ ನನಗೆ ಚಿಕಿತ್ಸೆ ನೀಡಿ ಎಂದು ಕೇಳಿದಾಗ ಆಸ್ಪತ್ರೆಯವರು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸರ್ಕಾರದ ಯೋಜನೆಯಾಗಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಬಡ ರೋಗಿಗಳಿಗೆ ಚಿಕಿತ್ಸೆ ನೀಡದೆ ಅವರನ್ನು ಯಾಮಾರಿಸಲಾಗುತ್ತಿದೆ. ಬಡವರಿಂದ ಹಣ ವಸೂಲಿ ಮಾಡುತ್ತಿರುವ ಆಸ್ಪತ್ರೆಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಮಿತಿಯ ವಿಭಾಗೀಯ ಅಧ್ಯಕ್ಷ ಸಂಗಮೇಶ್ ಭಾವಿದೊಡ್ಡಿ, ಜಿಲ್ಲಾಧ್ಯಕ್ಷ ವಿಶಾಲ್ ದೊಡ್ಡಿ, ಪ್ರಮುಖರಾದ ಸಾಹಿಲ್ ಬಹುತ್, ಬಶೀರ್ ಖಾನ್, ಸತ್ತಾರಮಿಯಾ, ಪುಟ್ಟು ಚತುರೆ, ಸೂರ್ಯಕಾಂತ್ ಬುಡಜರೆ, ಜಗನ್ನಾಥ್ ಶಿಂಧೆ ಹಾಗೂ ಶಾಮರಾವ್ ಗಂಜೆ ಸೇರಿದಂತೆ ಇತರರು ಉಪಸ್ಥಿತರಿದ್ದರು.







