ಬೀದರ್ | ರೈತರ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮನವಿ

ಬೀದರ್ : ಔರಾದ್ ತಾಲ್ಲೂಕಿನಾದ್ಯಂತ ಹಳ್ಳಿಗಳಲ್ಲಿ ರೈತರ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಒತ್ತಾಯ ಮಾಡಿದೆ.
ಇಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಔರಾದ್ ತಾಲ್ಲೂಕಿನಲ್ಲಿ ಬರುವ ಚಿಂತಾಕಿ, ಸಂತಪೂರ್, ವಡಗಾಂವ್ ಹೋಬಳಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ರೈತರ ಹೊಲದ ಗಡಿ ರೇಖೆ ಮಣ್ಣಿನಿಂದ ನಿರ್ಮಿಸಿದ್ದು, ಅವಶ್ಯಕತೆಗೂ ಮೀರಿ ಯಂತ್ರ ಬಳಸಿ ಕೋಟ್ಯಾಂತರ ರೂಪಾಯಿಗಳ ನಕಲಿ ಬಿಲ್ಲು ಲೂಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವ್ಯವಸ್ಥೆಯು ಜಲಾನಯನ ಪ್ರದೇಶದಲ್ಲಿನ ಮಾನವ ಸಂಪನ್ಮೂಲ ಮತ್ತು ಪರಿಸರದ ಒಟ್ಟಾರೆ ಅಭಿವೃದ್ಧಿಯು ಸರಕಾರದ ಉದ್ದೇಶವಾಗಿದೆ. ಆದರೆ ಔರಾದ್ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ಬಿಲ್ಲು ಪಡೆಯುವುದಕ್ಕಾಗಿ ರೈತರ ಭೂಮಿಯಲ್ಲಿ ಮನಬಂದಂತೆ ಅಗೆದು ಭೂಮಿ ಉಪಯೋಗಕ್ಕೆ ಬಾರದಂತೆ ಹಾಳು ಮಾಡಿರುತ್ತಾರೆ ಎಂದು ದೂರಲಾಗಿದೆ.
ಕೌಠಾ (ಬಿ) ಹಾಗೂ ಧೂಪತಮಹಾಗಾಂವ್ ಗ್ರಾಮ ಪಂಚಾಯತಿಯಲ್ಲಿ ವಿವಿಧ ಕೆಲಸಗಳು ಅಪೂರ್ಣಗೊಂಡಿದ್ದು ಕೃಷಿಹೊಂಡ, ಕ್ಷೇತ್ರ ಬದ್ದು, ಕಂದಕ, ಗುಂಡಿ ಬದ್ದು, ಸಮಪಾತಳಿ ಪಟ್ಟಿ, ಗುಂಡುಕಲ್ಲು ಬದ್ದು, ನೀರು ದಾರಿ ಸೇರಿದಂತೆ ಇನ್ನು ಹಲವಾರು ಕೆಲಸಗಳು ರೈತರ ಹೊಲದಲ್ಲಿ ಸಂಪೂರ್ಣ ಕಳಪೆಮಟ್ಟದಿಂದ ಕೂಡಿವೆ. ಕೂಡಲೇ ಔರಾದ್ ತಾಲ್ಲೂಕಿನಲ್ಲಿ ರಿವಾರ್ಡ್ ಯೋಜನೆಗೆ ಸಂಬಂಧಪಟ್ಟ ಕಾಮಗಾರಿಗಳು ಗ್ರಾಮವಾರುವಾಗಿ ತನಿಖೆ ಮಾಡಬೇಕು. ಹಿಂದಿನ ಕಾಮಗಾರಿಗಳು ತನಿಖೆಯಾಗುವವರೆಗೆ ಸಹಾಯಕ ನಿರ್ದೇಶಕ ಧುಳಪ್ಪಾ ಅವರಿಗೆ ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಲಾಗಿದೆ.
ಕಾಮಗಾರಿಗೆ ಸಂಬಂಧಪಟ್ಟಂತೆ ಯಾವುದೇ ಬಿಲ್ಲು ಮಂಜೂರಾಗದಂತೆ ತಡೆ ಹಿಡಿಯಬೇಕು. ಇದರ ವಿರುದ್ದ ಕೂಡಲೇ ಕ್ರಮ ಜರುಗಿಸದಿದ್ದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಜಿಲ್ಲಾ ಸಮಿತಿ ವತಿಯಿಂದ ಮೋಸ ಹೋಗಿರುವ ರೈತರ ಜತೆಗೂಡಿ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಕಲಬುರಗಿ ವಿಭಾಗೀಯ ಸಂಚಾಲಕ ಉಮೇಶಕುಮಾರ್ ಸ್ವಾರಳ್ಳಿಕರ್, ಜಿಲ್ಲಾ ಸಂಚಾಲಕ ಬಾಬುರಾವ್ ಕೌಠಾ, ಅಶೋಕ್ ಸಂಗಮ್ ಹಾಗೂ ಜಿಲ್ಲಾ ಖಜಾಂಚಿ ದೇವರಾಜ್ ಡಾಕುಳಗಿ ಉಪಸ್ಥಿತರಿದ್ದರು.







