ಬೀದರ್ | ಪ್ರವೇಶಾತಿಗೆ ಅರ್ಜಿ ಆಹ್ವಾನ

ಬೀದರ್ : 2025-26ನೇ ಸಾಲಿಗೆ ಜಿಲ್ಲೆಯಲ್ಲಿನ ಪ್ರತಿಷ್ಠಿತ ಕನ್ನಡ ಮಾಧ್ಯಮ ಶಾಲೆಯ ವಸತಿ ಶಾಲೆಯಲ್ಲಿ ಪರಿಶಿಷ್ಟ ಜಾತಿಯ ಪ್ರತಿಭಾವಂತ 6ನೇ ತರಗತಿಯ ವಿದ್ಯಾರ್ಥಿಗಳನ್ನು ಅರ್ಹತಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲು ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್ https://swdservices.karnataka.gov.in/EducationPrestigious/authentication/login?redirectUrl=/profile ಮೂಲಕ ಆನ್‌ಲೈನ್ ಅರ್ಜಿ ಭರ್ತಿ ಮಾಡಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಅರ್ಹತೆಗಳು :
ವಿದ್ಯಾರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ ಮಿತಿ 2.50 ಲಕ್ಷ ರೂ. ಗಳ ಒಳಗಿರಬೇಕು. ಬಡತನ ರೇಖೆಗಿಂತ ಕೆಳಗಿನ ಮಟ್ಟದ ಹಾಗೂ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ವಿಫಲರಾಗಿರುವ ಅತಿ ಹಿಂದುಳಿದ ವರ್ಗದವರಿಗೆ ಈ ಸೌಲಭ್ಯವನ್ನು ನೀಡಲು ಉದ್ದೇಶಿಸಲಾಗಿದೆ. ಪೌರ ಕಾರ್ಮಿಕರ, ಸಫಾಯಿ ಕರ್ಮಚಾರಿಗಳ, ಸ್ಮಶಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರ ಮಕ್ಕಳು, ದೇವದಾಸಿಯವರ ಮಕ್ಕಳು, ಅಂಗವಿಕಲತೆಯನ್ನು ಹೊಂದಿರುವ ಮಕ್ಕಳು, ಕೋವೀಡ್ ಮುಂತಾದ ಪ್ರಕೃತಿ ವಿಕೋಪದಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳು, ಏಕ ಪೋಷಕ ಮಕ್ಕಳು, ಯೋಜನಾ ನಿರಾಶ್ರಿತರ, ಕೊಳಗೇರಿಗಳಲ್ಲಿ ವಾಸಿಸುತ್ತಿರುವವರ, ಸಾಲ ಬಾಧೆಯಿಂದ ಆತ್ಮಹತ್ಯೆಗೆ ಗುರಿಯಾದವರ, ದೌರ್ಜನ್ಯದಲ್ಲಿ ನೊಂದವರ, ಮಾಜಿ ಸೈನಿಕರ, ಕೃಷಿ ಕಾರ್ಮಿಕರ ಹಾಗೂ ಜೀತ ವಿಮುಕ್ತ ಮಕ್ಕಳು 5ನೇ ತರಗತಿಯಲ್ಲಿ ತೇರ್ಗಡೆಯಾಗಿ ಶೇ.60 ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮುಖ್ಯತೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರವೇಶ ಕೋರಿ ಬರುವ ಅರ್ಜಿಗಳಲ್ಲಿ ಶೇ.50 ರಷ್ಟು ಬಾಲಕರಿಗೆ ಮತ್ತು ಶೇ.50 ರಷ್ಟು ಬಾಲಕಿಯರಿಗೆ ಮೀಸಲಾತಿ ಕಲ್ಪಿಸಲಾಗುವುದು. ಆಯ್ಕೆ ಮಾಡಲಾದ ವಿದ್ಯಾರ್ಥಿಗಳನ್ನು ಯಾವ ವಿದ್ಯಾ ಸಂಸ್ಥೆಗಳಲ್ಲಿ ದಾಖಲಾತಿ ಕೋರುತ್ತಾರೆ ಅದೇ ಶಾಲೆಯಲ್ಲಿ ಪ್ರವೇಶಾತಿ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರವೇಶಕ್ಕಾಗಿ ಎ.19 ರಿಂದ ಮೇ 3ರ ಸಾಯಂಕಾಲ 5:00 ಗಂಟೆಯೊಳಗಾಗಿ ಅರ್ಜಿಗಳು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.







