Bidar | ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ

ಬೀದರ್: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ 2026-27ನೇ ಸಾಲಿನ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಎನ್. ನರೇಂದ್ರಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಹಾಗೂ ಗಮಕ ಸೇರಿದಂತೆ ಆರು ಕಲಾ ಪ್ರಕಾರಗಳಲ್ಲಿ ಅಭ್ಯಾಸ ಮಾಡುತ್ತಿರುವ 16ರಿಂದ 24 ವರ್ಷದೊಳಗಿನ ಅಭ್ಯರ್ಥಿಗಳು ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಈ ಸಾಲಿನ ಶಿಷ್ಯವೇತನಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೊಬೈಲ್ ವಿಡಿಯೋ ಚಿತ್ರೀಕರಣದ ಮೂಲಕ ನಡೆಸಲು ಅಕಾಡೆಮಿ ನಿರ್ಧರಿಸಿದೆ. ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವ ಬದಲು, ಅರ್ಜಿಯಲ್ಲಿ ನೀಡಿರುವ ಪಠ್ಯಕ್ರಮವನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿ ಪೆನ್‌ಡ್ರೈವ್‌ನಲ್ಲಿ ಅಳವಡಿಸಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ವಿಡಿಯೋ ಇರುವ ಪೆನ್‌ಡ್ರೈವ್ ಅನ್ನು ‘ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು–560002’ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬೇಕು.
ಸ್ವೀಕೃತ ಅರ್ಜಿಗಳನ್ನು ಆಯಾ ಕಲಾಪ್ರಕಾರಗಳಿಗೆ ಅನುಗುಣವಾಗಿ ತೀರ್ಪುಗಾರರು ಪರಿಶೀಲಿಸಲಿದ್ದು, ಅಭ್ಯರ್ಥಿಗಳು ಸಲ್ಲಿಸಿರುವ ಪೆನ್‌ಡ್ರೈವ್‌ನಲ್ಲಿನ ವಿಡಿಯೋವನ್ನು ವೀಕ್ಷಿಸಿ ಶಿಷ್ಯವೇತನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಶಿಷ್ಯವೇತನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಅಕಾಡೆಮಿಯ ಫೇಸ್‌ಬುಕ್ ಪುಟದಲ್ಲಿ ಪಡೆಯಬಹುದು. ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಲ್ಲದೆ, ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದಲೂ ಅರ್ಜಿ ಪಡೆಯಬಹುದು.
ಪಠ್ಯಕ್ರಮದ ವಿಡಿಯೋ ಚಿತ್ರೀಕರಿಸಿದ ಪೆನ್‌ಡ್ರೈವ್‌ನೊಂದಿಗೆ ಸೆಪ್ಟೆಂಬರ್ 15ರೊಳಗೆ ಅರ್ಜಿ ಸಲ್ಲಿಸಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ರಿಜಿಸ್ಟ್ರಾರ್ ಎನ್. ನರೇಂದ್ರಬಾಬು ತಿಳಿಸಿದ್ದಾರೆ.






