ಬೀದರ್ | ವಸತಿ ಶಾಲೆಗಳ ವಿಶೇಷ ವರ್ಗದಲ್ಲಿ ಖಾಲಿ ಇರುವ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೀದರ್ : ಕ್ರೈಸ್ತ ವಸತಿ ಶಾಲೆಗಳ 6ನೇ ತರಗತಿಯ ಉಳಿಕೆ ಸ್ಥಾನಗಳ ತುಂಬಲು ವಿಶೇಷ ವರ್ಗದ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಇಂದಿರಾ ಗಾಂಧಿ ವಸತಿ ಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಸ್ಥಾನಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪ್ರವೇಶ ಪರೀಕ್ಷೆ ಮತ್ತು ಕೌನ್ಸಲಿಂಗ್ ಮೂಲಕ ಹಂಚಿಕೆ ಮಾಡಲಾಗಿದ್ದು, ಮಕ್ಕಳು ಪ್ರವೇಶ ಕೂಡ ಪಡೆದಿದ್ದಾರೆ. ಆದರೆ ವಿಶೇಷ ವರ್ಗದಲ್ಲಿ ಖಾಲಿ ಉಳಿದ ಸ್ಥಾನಗಳು ಭರ್ತಿ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ವಿಧವಾ, ವಿಧುರ, ಅನಾಥ, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು, ಶೇ.25 ಕ್ಕಿಂತ ಹೆಚ್ಚು ಅಂಗವೀಕಲತೆ ಹೊಂದಿದ, ಹೆಚ್.ಐ.ವಿ ಗೆ ತುತ್ತಾದ ಪೋಷಕರ, ಸರ್ಕಾರದ ಯೋಜನೆಗಳಿಂದ ಸ್ಥಳಾಂತರಗೊಂಡ ಯೋಜನಾ ನಿರಾಶ್ರಿತರ, ಚಿಂದಿ ಆಯುವ ಮಕ್ಕಳು, ಸ್ಮಶಾನ ಕಾರ್ಮಿಕರ, ಬಾಲ ಕಾರ್ಮಿಕರು, ಮಾಜಿ ದೇವದಾಸಿಯರ, ಆಶ್ರಮ ಶಾಲೆಯ ಮಕ್ಕಳು, ಸಂಚಾರಿ ಕುರಿಗಾಹಿರವರ, ಮಾಜಿ ಸೈನಿಕ, ಅಲೆಮಾರಿ, ಅರೆ ಅಲೆಮಾರಿ, ಪೌರಕಾರ್ಮಿಕರ, ಸಪಾಯಿ ಕರ್ಮಚಾರಿಗಳು ಹಾಗೂ ಮ್ಯಾನ್ವೆಲ್ ಸ್ಕ್ಯಾವೆಂಜರ್ ಅವರ ಮಕ್ಕಳು ಸೇರಿದಂತೆ ಇತ್ಯಾದಿ ವರ್ಗದ ಮಕ್ಕಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅರ್ಹರು ಜು.10 ರ ಒಳಗಾಗಿ ಆಯಾ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ವಸತಿ ಶಾಲೆ ಇಲ್ಲವೇ ಮೊಬೈಲ್ ಸಂಖ್ಯೆ: 78999 98755, 99451 96115, 99868 50550 ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.







