ಬೀದರ್ ಎಟಿಎಂ ದರೋಡೆಕೊರರ ಫೋಟೋ ಬಿಡುಗಡೆ
ಬಹುಮಾನ ಘೋಷಣೆಯಾದ ಪೋಸ್ಟರ್ ವೈರಲ್

ಬೀದರ್ : ಎಟಿಎಂ ದರೋಡೆ ಹಾಗೂ ಸಿಬ್ಬಂದಿ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಫೋಟೋ ಬಿಡುಗಡೆ ಮಾಡಲಾಗಿದ್ದು, ದರೋಡೆಕೋರರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಫತೆಪುರ್ ಫುಲ್ವರಿಯಾ ನಗರದ ನಿವಾಸಿ ಅಮನ್ ಕುಮಾರ್ ಹಾಗೂ ಅದೇ ಜಿಲ್ಲೆಯ ಮಹಿಶೋರ್ ನಗರದ ನಿವಾಸಿ ಅಲೋಕ್ ಕುಮಾರ್ ಅಲಿಯಾಸ್ ಅಶುತೋಷ್ ಆರೋಪಿಗಳು ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ಭಾಗಿಯಾದ ಈ ಇಬ್ಬರು ಆರೋಪಿಗಳ ಫೋಟೋ ಜೊತೆಗೆ ಅವರ ವಿಳಾಸ ಕೂಡ ವೈರಲ್ ಆದ ಪೋಸ್ಟರ್ ನಲ್ಲಿ ದಾಖಲಾಗಿದೆ.
ದರೋಡೆಕೊರರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ರಾಜ್ಯ ಪೊಲೀಸ್ ಇಲಾಖೆಯಿಂದ ಹೊರಡಿಸಲಾಗಿದೆ ಎನ್ನಲಾದ ಪ್ರಕಟಣೆ ಕೂಡ ಆ ಜಾಹಿರಾತಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಧಿಕೃತವಾಗಿ ಯಾವುದೇ ಪ್ರಕಟಣೆ ಹೊರಡಿಸಿಲ್ಲ.
ಜ.16 ರ ಬೆಳಿಗ್ಗೆ ನಗರದ ಹೃದಯ ಭಾಗದಲ್ಲಿರುವ ಎಸ್‌ಬಿಐ ಬ್ಯಾಂಕಿನಿಂದ ಎಟಿಎಂ ಗೆ ಹಣ ಹಾಕಲು ಬರುತಿದ್ದಾಗ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ ಇಬ್ಬರು ದರೋಡೆಕೋರರು ಸುಮಾರು 83 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದರು.
ಘಟನೆಯಲ್ಲಿ ಚಿದ್ರಿ ಗ್ರಾಮದ ನಿವಾಸಿಯಾದ ಗಿರಿ ವೆಂಕಟೇಶ್ ಎಂಬ ಎಟಿಎಂ ಸಿಬ್ಬಂದಿ ಮೃತಪಟ್ಟು, ಶಿವಕುಮಾರ್ ಎಂಬ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಇದೀಗ ಸುಮಾರು ಒಂದು ತಿಂಗಳ ನಂತರ ಇಬ್ಬರು ದರೋಡೆಕೊರರ ಫೋಟೋ ಮತ್ತು ಅವರ ಮೂಲ ಪತ್ತೆ ಹಚ್ಚಲಾಗಿದೆ ಎಂದು ಖಚಿತ ಮೂಲಗಳಿಂದ ಮಾಹಿತಿ ದೊರೆತಿದೆ. ಆದರೆ ವೈರಲ್ ಆದ ಪೋಸ್ಟರ್ ಲ್ಲಿ ದರೋಡೆಕೊರರ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಣೆಯ ಬಗ್ಗೆ ಮಾಹಿತಿ ಇದ್ದು, ಇದರ ಬಗ್ಗೆ ಪೊಲೀಸ್ ಇಲಾಖೆಯಿಂದ ಖಚಿತ ಮಾಹಿತಿ ಅಥವಾ ಅಧಿಕೃತ ಘೋಷಣೆಯಾಗಿಲ್ಲ ಎಂದು ತಿಳಿದು ಬಂದಿದೆ.







