Bidar | ತಂಬಾಕು, ಸಾರಾಯಿ ಸೇವನೆಯಿಂದ ದೂರವಿರಿ: ಡಾ.ಅಬ್ದುಲ್ ಖದೀರ್

ಬೀದರ್: ತಂಬಾಕು ಉತ್ಪನ್ನಗಳು ಮತ್ತು ಸಾರಾಯಿ ಸೇವನೆಯು ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ಕಾಯಿಲೆಗಳಿಗೆ ಕಾರಣವಾಗುವುದರಿಂದ ಪ್ರತಿಯೊಬ್ಬರೂ ಮಾದಕ ವಸ್ತುಗಳಿಂದ ದೂರವಿದ್ದು ಆರೋಗ್ಯಪೂರ್ಣ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದರು.
ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮವನ್ನು ವ್ಯಸನಮುಕ್ತಗೊಳಿಸುವ ಉದ್ದೇಶದಿಂದ ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯು ಸೋಮವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತುಗಳ ವ್ಯಸನದಿಂದ ಯುವಕರು, ಮಧ್ಯವಯಸ್ಕರು ಹಾಗೂ ಹಿರಿಯರು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸಮಾಜ ಮತ್ತು ದೇಶದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದ್ದು, ಯುವಶಕ್ತಿ ದುರ್ಬಲವಾಗುತ್ತಿದೆ. ಕುಟುಂಬಕ್ಕೆ ಆಸರೆಯಾಗಬೇಕಾದ ಅನೇಕ ಯುವಕರು ವ್ಯಸನದ ಕಾರಣದಿಂದಲೇ ಕುಟುಂಬಕ್ಕೆ ಭಾರವಾಗುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಬೀದರ್ ಜಿಲ್ಲೆಯನ್ನು ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ಸಮಿತಿಯಿಂದ ನಿರಂತರ ಅಭಿಯಾನ ನಡೆಸಲಾಗುತ್ತಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳು ಮತ್ತು ಸಾರಾಯಿ ಸೇವನೆಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯವನ್ನು ವ್ಯಸನಮುಕ್ತಗೊಳಿಸುವಂತೆ ಈಗಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಜಾಥಾದ ವೇಳೆ ಕಮಠಾಣ ಗ್ರಾಮದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಅಲ್ಲದೆ, ಕಿರಾಣಿ ಅಂಗಡಿಗಳ ಮಾಲಕರನ್ನು ಭೇಟಿ ಮಾಡಿ ತಂಬಾಕು ಉತ್ಪನ್ನಗಳ ಮಾರಾಟ ನಿಲ್ಲಿಸುವಂತೆ ಮನವಿ ಮಾಡಲಾಯಿತು.
ತಂಬಾಕು ಉತ್ಪನ್ನಗಳ ಬದಲಿಗೆ ಇತರ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ವ್ಯಾಪಾರ ನಡೆಸಬಹುದಾಗಿದೆ. ತಂಬಾಕು ಉತ್ಪನ್ನಗಳು ವಿಷಕ್ಕೆ ಸಮಾನವಾಗಿರುವುದರಿಂದ ಅವುಗಳ ವ್ಯಾಪಾರದಿಂದ ದೂರ ಉಳಿಯಬೇಕು ಎಂದು ಅಂಗಡಿ ಮಾಲೀಕರಿಗೆ ಮನವರಿಕೆ ಮಾಡಿಕೊಡಲಾಯಿತು.
ಈ ವೇಳೆ ರಾಜಕುಮಾರ್, ರಜನಿಕಾಂತ್, ಸಿದ್ದಪ್ಪ ಹಾಗೂ ಗೋಪಾಲ್ ಸೇರಿದಂತೆ ಹಲವು ಕಿರಾಣಿ ಅಂಗಡಿ ಮಾಲೀಕರು ತಮ್ಮ ಅಂಗಡಿಗಳಲ್ಲಿದ್ದ ಗುಟ್ಕಾ ಪ್ಯಾಕೆಟ್‌ಗಳನ್ನು ಹೊರತೆಗೆದು ಸುಟ್ಟು ಹಾಕಿ, ಇನ್ನು ಮುಂದೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಿದರು. ಬಳಿಕ ಅವರನ್ನು ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಅಶೋಕ್ ವಡಗಾವೆ, ಪ್ರಮುಖರಾದ ಡಾ. ರಾಜಶೇಖರ ಸೇಡಂಕರ್, ಶಂಭುಲಿಂಗ್ ವಾಲ್ದೊಡ್ಡಿ, ಮಕ್ಸೂದ್ ಖಾನ್, ಅಬ್ದುಲ್ ರೆಹಮಾನ್ ಆಜ್ಮಿ ಹಾಗೂ ರಾಮಕೃಷ್ಣ ರೆಡ್ಡಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.






